Search This Blog

Tuesday, April 26, 2011

ಎಡ್ವರ್ಡ್ ಪೀಟರ್ ರೈಸ್



ಬ್ರಿಟಿಷರು ಭಾರತದಲ್ಲಿದ್ದಾಗ ಯೂರೋಪ್ ದೇಶಗಳಿಂದ ಇಲ್ಲಿಗೆ ಆಗಮಿತರಾದ ಹಲವ...ರು, ಅವರು ಇಲ್ಲಿಗೆ ಬಂದ ಆಡಳಿತ ಮತ್ತು ಧಾರ್ಮಿಕ ಪ್ರಚಾರದ ಕೆಲಸಗಳ ಜೊತೆಗೆ ಇಲ್ಲಿನ ಭಾಷೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದಲ್ಲಿ ತಮ್ಮದೇ ಆದ ಕೊಡುಗೆ ನೀಡಿರುವ ಹಲವಾರು ನಿದರ್ಶನಗಳಿವೆ. ಇಂತಹ ಗಣನೀಯರಲ್ಲಿ ಬೆಂಜಮಿನ್ ರೈಸ್ ಮತ್ತು ಅವರ ಮಕ್ಕಳಾದ ಬಿ.ಎಲ್. ರೈಸ್, ಇ.ಪಿ. ರೈಸ್ ಪ್ರಮುಖರಾಗಿದ್ದಾರೆ. ಇವರಲ್ಲಿ ಬಿ. ಎಲ್ ರೈಸ್ ಶಾಸನ ಮತ್ತು ಸಂಶೋಧನ ಕ್ಷೇತ್ರದಲ್ಲಿ ಅಮೋಘ ಸೇವೆ ಸಲ್ಲಿಸಿ ‘ಶಾಸನ ಪಿತಾಮಹ’ ನೆಂಬ ಖ್ಯಾತಿ ಪಡೆದವರು. ಅವರ ಕಿರಿಯ ಸಹೋದರ ಎಡ್ವರ್ಡ್ ಪೀಟರ್ ರೈಸ್ ಅವರು ಕೂಡಾ ಕನ್ನಡಕ್ಕೆ ತಮ್ಮದೇ ಆದ ಮಹತ್ವದ ಕೊಡುಗೆಯನ್ನುನೀಡಿದ್ದಾರೆ.

ಎಡ್ವರ್ಡ್ ಪೀಟರ್ ರೈಸ್ ಇ.ಪಿ. ರೈಸ್ ಎಂದೇ ಕನ್ನಡ ಸಾಹಿತ್ಯ ವಲಯದಲ್ಲಿ ಖ್ಯಾತರು. ಅವರು 1849ನೆಯ ಏಪ್ರಿಲ್ 26ರಂದು ಬೆಂಗಳೂರಿನಲ್ಲಿ ಜನಿಸಿದರು. ತಮ್ಮ ಧಾರ್ಮಿಕ ಪ್ರಚಾರ ಕಾರ್ಯದ ಜೊತೆ ಜೊತೆಗೆ ಕನ್ನಡ ಸಾಹಿತ್ಯ ಸಂಸ್ಕೃತಿಗಳನ್ನು ಮತ್ತು ಕನ್ನಡ ಭಾಷೆಯನ್ನು ವಿಶೇಷವಾಗಿ ರೂಢಿಸಿಕೊಂಡು ಅವುಗಳಲ್ಲಿ ವಿಶಿಷ್ಟ ಪ್ರೀತಿಯನ್ನು ಬೆಳೆಸಿಕೊಂಡರು. 1915ರವರೆಗೆ ಬೆಂಗಳೂರಿನಲ್ಲಿದ್ದು, ನಂತರ ಹ್ಯಾರೋ ಪಟ್ಟಣದಲ್ಲಿ ನೆಲೆಸಿದ ಅವರು 1936ರ ಜುಲೈ ವೇಳೆಗೆ ನಿಧನರಾದರು. ಭಾರತವನ್ನು ಬಿಟ್ಟು ಹ್ಯಾರೋದಲ್ಲಿ ನೆಲೆಸಿದ ಮೇಲೂ ಸಹಾ ಕನ್ನಡ ಭಾಷಾ ಸಾಹಿತ್ಯಗಳ ವಿಷಯದಲ್ಲಿ ವಿಶೇಷ ಪ್ರೀತಿ ಬೆಳೆಸಿಕೊಂಡಿದ್ದ ರೈಸ್ ಅವರು ಹಲವು ಕೃತಿಗಳ ರಚನೆಯನ್ನು ಕೈಗೊಂಡರು.

ಮೊದ ಮೊದಲು ಅವರ ಧಾರ್ಮಿಕ ಪ್ರಚಾರಕ್ಕೆ ಅನುಕೂಲಕರವಾದ ಕೃತಿಗಳನ್ನು ಕನ್ನಡದಲ್ಲಿ ರಚಿಸಿದರು. ಹಳೆಯ ಒಡಂಬಡಿಕೆಯನ್ನು 1890ರಲ್ಲಿ ಸರಳ ಕನ್ನಡದಲ್ಲಿ ಬರೆದು ಪ್ರಕಟಿಸಿದರು. ಮೋಸೆಯ ವಿರಚಿತ ಮೊದಲ ಕಾಂಡ, ಯಾತ್ರಾ ಕಾಂಡ ಮತ್ತು ಕನ್ನಡ ಬೈಬಲ್ ಕೀರ್ತನೆಗಳು ನಂತರ ಪ್ರಕಟಗೊಂಡವು.

ಇಂಗ್ಲಿಷ್ ಭಾಷೆಯಲ್ಲಿ ರೈಸರು ಮೂರು ಕೃತಿಗಳನ್ನು ರಚಿಸಿದ್ದಾರೆ. ಕನ್ನಡ ಸಾಹಿತ್ಯ ಚರಿತ್ರೆಯ ದೃಷ್ಟಿಯಿಂದ ಅತ್ಯಂತ ಗಮನಾರ್ಹ ಕೃತಿಯೆಂದರೆ ‘ಹಿಸ್ಟರಿ ಆಫ್ ಕೆನರೀಸ್ ಲಿಟರೇಚರ್’. ಇಂಗ್ಲಿಷ್ ಬಾಷೆಯಲ್ಲಿ ಕನ್ನಡ ಸಾಹಿತ್ಯ ಚರಿತ್ರೆಯನ್ನು ಮೊಟ್ಟಮೊದಲ ಬಾರಿಗೆ ಪರಿಚಯ ಮಾಡಿಕೊಡುವ ಕೃತಿ ಇದಾಗಿದೆ. ಇದು 1915ರಲ್ಲಿ ಮೊದಲು ಪ್ರಕಟವಾಯಿತು. ಧರ್ಮ ಪ್ರಚಾರಕರಾಗಿ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅಮೂಲ್ಯ ಸೇವೆ ಸಲ್ಲಿಸಿದ ತಮ್ಮ ತಂದೆಯವರ ಜೀವನ ಚರಿತ್ರೆಯನ್ನು ‘ಬೆಂಜಮಿನ್ ರೈಸ್ ಆರ್ ಫಿಫ್ಟಿ ಇಯರ್ಸ್ ಇನ್ ದಿ ಮಾಸ್ಟರ್ ಸರ್ವೀಸ್’ ಎಂಬ ಹೆಸರಿನಲ್ಲಿ ಪ್ರಕಟಿಸಿದರು. ಅವರ ಮತ್ತೊಂದು ಕೃತಿ ‘ದಿ ಮಹಾಭಾರತ ಅನಾಲಿಸಿಸ್ ಅಂಡ್ ಇಂಡೆಕ್ಸ್’ ಇದು 1934ರಲ್ಲಿ ಆಕ್ಸ್ ಫರ್ಡ್ ಯೂನಿವರ್ಸಿಟಿ ಪ್ರಕಾಶನದ ಮೂಲಕ ಪ್ರಕಟವಾಗಿದೆ.

ಕನ್ನಡ ಸಾಹಿತ್ಯದ ಇತಿಹಾಸ ದೃಷ್ಟಿಯಿಂದ ರೈಸರು ರಚಿಸಿದ ‘ಹಿಸ್ಟರ ಆಫ್ ಕೆನರೀಸ್ ಲಿಟರೇಚರ್’ ಅತ್ಯಂತ ಗಮನಾರ್ಹ ಕೃತಿಯೆಂದು ಹೇಳಬಹುದು. ಈ ಕೃತಿ ಇಡೀ ಕನ್ನಡ ಸಾಹಿತ್ಯವನ್ನು ಮೊದಲ ಬಾರಿಗೆ ಸಾಹಿತ್ಯ ಚರಿತ್ರೆಯ ಪರಿಕಲ್ಪನೆಯಲ್ಲಿ ಗಮನಿಸಿದ ಕೃತಿ. ಅದು ಹೊರ ಬರುವ ಹೊತ್ತಿಗೆ ಆರ್ ನರಸಿಂಹಾಚಾರ್ಯರ ಕರ್ಣಾಟಕ ಕವಿಚರಿತೆಯ ಮೊದಲ ಸಂಪುಟ (1907) ಮಾತ್ರ ಪ್ರಕಟವಾಗಿತ್ತು. ಡಾ. ಕಿಟಲ್, ಬಿ. ಎಲ್. ರೈಸ್ ಮೊದಲಾದವರು ತಾವು ಸಂಪಾದಿಸಿದ ಕೃತಿಗಳಿಗೆ ಬರೆದ ಉಪೋದ್ಘಾತಗಳಲ್ಲಿ ಮತ್ತು ಬಿಡಿ ಲೇಖನಗಳಲ್ಲಿ ಸಾಹಿತ್ಯ ಚರಿತ್ರೆಯ ಹೊಳಹುಗಳನ್ನು ಕಾಣಿಸಿದ್ದರು. ರೈಸ್ ಅವರ ಕೃತಿ ರಚನೆಯ ಮೊದಲು ಕನ್ನಡ ಸಾಹಿತ್ಯವನ್ನು ಒಟ್ಟಾಗಿ ಗ್ರಹಿಸುವ ಪ್ರಯತ್ನ ಆಗಿರಲಿಲ್ಲ. ಅಂಥ ಹಿನ್ನೆಲೆಯಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಕನ್ನಡ ಸಾಹಿತ್ಯದ ಇತಿಹಾಸವನ್ನು ಬರೆಯಲು ಹೊರಟರು. ಕನ್ನಡ ಸಾಹಿತ್ಯವನ್ನು ಕುರಿತು ವಿಹಂಗಮ ದೃಷ್ಟಿಯಿಂದ ಕೂಡಿದ್ದರೂ ಸಂಪೂರ್ಣ ಕಲ್ಪನೆಯನ್ನು ಕೊಡುವಂಥ ಈ ಕೃತಿ ಅವರು ಬರೆದದ್ದು ಗಮನಾರ್ಹವಾಗಿದೆ. ಕನ್ನಡ ಸಾಹಿತ್ಯದ ರಸಮಯ ಅಂಶಗಳನ್ನು ಪ್ರಪಂಚಕ್ಕೆ ಪರಿಚಯಿಸುವ ಒಂದು ಸ್ತುತ್ಯ ಕಾರ್ಯವನ್ನು ಅವರು ಕೈಗೊಂಡರು. ಹನ್ನೆರಡು ಅಧ್ಯಾಯಗಳಲ್ಲಿ ಕನ್ನಡ ಸಾಹಿತ್ಯವನ್ನು ವಿಭಾಗಿಸಿಕೊಂಡು ವಿವೇಚಿಸಿದ್ದಾರೆ. ಕಾವ್ಯ ಭಾಗಗಳನ್ನು ಉದಾಹರಿಸುವಾಗ ಅನೇಕ ಕಾವ್ಯಭಾಗಗಳನ್ನು ಇಂಗ್ಲಿಷಿಗೆ ಭಾಷಾಂತರಿಸಿದ್ದಾರೆ. ಸೋಮೇಶ್ವರ ಶತಕ, ಬಸವ ಪುರಾಣ, ಸರ್ವಜ್ಞನ ವಚನಗಳು ಮುಂತಾದುವನ್ನು ಅನುವಾದಿಸಲಾಗಿದೆ.

ಇ. ಪಿ. ರೈಸರ ಕೃತಿಯಲ್ಲಿನ ಹಲವಾರು ಅಂಶಗಳ ಬಗೆಗೆ ಹಲಾವರು ಭಿನ್ನಾಭಿಪ್ರಾಯಗಳು ನಂತರದಲ್ಲಿ ಮೂಡಿವೆ. ಇದರ ಪ್ರಾತಿನಿಧಿಕವಾಗಿ ರಂ.ಶ್ರೀ. ಮುಗಳಿಯವರ ಅಭಿಪ್ರಾಯವನ್ನು ಇಲ್ಲಿ ನೆನೆಯುವುದು ಸೂಕ್ತವೆನಿಸುತ್ತದೆ. ‘ಹೊಸಗನ್ನಡ ಸಾಹಿತ್ಯದ ಆರಂಭ ಕಾಲದಲ್ಲಿ ಮಿಷನರಿ ವಿದ್ವಾಂಸರು ಅಂದು ಅವರಿಗೆ ದೊರೆತ ಸಾಮಗ್ರಿಯನ್ನು ಉಪಯೋಗಿಸಿ ಕನ್ನಡ ಸಾಹಿತ್ಯದ ಪರಿಚಯವನ್ನು ಇಂಗ್ಲಿಷಿನಲ್ಲಿ ಮಾಡಿಕೊಟ್ಟರು. ಅವಕ್ಕೆ ಚರಿತ್ರೆಯೆಂದಾಗಲಿ ಸಮೀಕ್ಷೆಯೆಂದಾಗಲಿ ಕರೆಯುವುದು ಸೂಕ್ತವಾಗದು. ಆ ಸಾಮಗ್ರಿಯೂ ಸ್ವಲ್ಪವಾಗಿತ್ತು’.

ಒಂದು ಭಾಷೆಯ ಬೆಳವಣಿಗೆಯ ಪ್ರಾರಂಭಿಕ ಹಂತದಲ್ಲಿ ಮಾಡುವ ಕೆಲಸಗಳಲ್ಲಿ ಗ್ರಹಿಕೆಯ ತೊಡಕುಗಳು, ಸೀಮಿತ ರೇಖೆಗಳು, ಗ್ರಹಿಕೆಯ ತೊಡಕುಗಳು ಇತ್ಯಾದಿ ಇರುತ್ತವಾದರೂ ಇ.ಪಿ. ರೈಸರ ಕಾರ್ಯ ಅತ್ಯಲ್ಪ ಸಾಮಗ್ರಿಗಳು ಮತ್ತು ವ್ಯವಸ್ಥೆಗಳಿದ್ದ ಕಾಲದಲ್ಲಿ ಉತ್ತಮ ಶ್ರಮ ಎಂಬುದನ್ನು ವಿದ್ವಾಂಸರು ಪುರಸ್ಕರಿಸುತ್ತಾರೆ. ಈ ಕೃತಿಯ ದ್ವಿತೀಯಾವೃತ್ತಿ 1921ರಲ್ಲಿ ಪ್ರಕಟವಾಯಿತು. ಶಾಸನಗಳು, ವಚನ, ಕೀರ್ತನೆ, ಷಟ್ಪದಿಗಳನ್ನು ಇಂಗ್ಲಿಷ್ ಭಾಷೆಗೆ ಭಾಷಾಂತರಿಸಿದ್ದಾರೆ. ಅವರ ಅನುವಾದ ಸಾಮರ್ಥ್ಯ ಉತ್ತಮ ಮಟ್ಟದ್ದಾಗಿ ಕಂಡು ಬರುತ್ತದೆ.

ರೈಸ್ ಅವರು ತಮ್ಮ ತಂದೆಯಾದ ಬೆಂಜಮಿನ್ನರ ಬಗ್ಗೆ ಒಂದು ಉತ್ತಮ ಜೀವನ ಚರಿತ್ರೆಯನ್ನು ಇಂಗ್ಲಿಷ್ ಭಾಷೆಯಲ್ಲಿ ರಚಿಸಿದ್ದಾರೆ. ಉತ್ತಮ ರೀತಿಯಲ್ಲಿ ಅಚ್ಚುಕಟ್ಟಾಗಿ ರಚಿತವಾದ ಈ ಜೀವನ ಚರಿತ್ರೆ ಇ.ಪಿ. ರೈಸ್ ಅವರ ಸಂಶೋಧನಾ ಮತ್ತು ವಸ್ತು ನಿಷ್ಠ ಮನೋಧರ್ಮಕ್ಕೆ ಉತ್ತಮ ಸಾಕ್ಷಿಯಾಗಿದೆ.

ರೈಸರ ಮೂರನೆಯ ಮಹತ್ವದ ಇಂಗ್ಲಿಷ್ ಕೃತಿ ‘ದಿ ಮಹಾಭಾರತ ಅನಾಲಿಸಿಸ್ ಅಂಡ್ ಇಂಡೆಕ್ಸ್’ ಎಂಬುದಾಗಿದೆ. 1934ರಲ್ಲಿ ಪ್ರಕಟವಾದ ಈ ಕೃತಿ ಇ. ಪಿ. ರೈಸರ ಅಧ್ಯಯನ ವ್ಯಾಪ್ತಿಯನ್ನು ಅನಾವರಣಗೊಳಿಸುತ್ತದೆ. ರೈಸ್ ಅವರು ವಿಷಯಾನುಕ್ರಮವಾಗಿ ಹೆಸರುಗಳು, ಯುದ್ಧಕಲೆ, ಕಲ್ಪಗಳು, ಯುಗಗಳು ಮುಂತಾದವುಗಳಿಗೆ ಸಮರ್ಪಕ ರೀತಿಯಲ್ಲಿ ವಿವರಣೆಯನ್ನು ನೀಡಿ ಮಹಾಭಾರತದ ಅಭ್ಯಾಸಕ್ಕೆ ಉಪಯುಕ್ತ ಕೈಪಿಡಿಯೊಂದನ್ನು ನೀಡಿದ್ದಾರೆ.

ರೈಸರು ಕನ್ನಡ ನಾಡು ನುಡಿಗಳ ವಿಷಯದಲ್ಲಿ ಅಪಾರವಾದ ಪ್ರೀತಿಯನ್ನು ಹೊಂದಿದ್ದರು. ತಮಗೆ ಬೇರೆ ಬೇರೆ ಸಂದರ್ಭಗಳಲ್ಲಿ ದೊರೆತಿದ್ದ ಅಮೂಲ್ಯ ವಸ್ತುಗಳನ್ನು ಬೆಂಗಳೂರಿನ ವಸ್ತು ಸಂಗ್ರಹಾಲಯಕ್ಕೆ ಕೊಡುಗೆಯಾಗಿ ನೀಡಿರುವುದು ಕಂಡುಬರುತ್ತದೆ. ಇ. ಪಿ. ರೈಸ್ ಅವರ ಸಾಮಾಜಿಕ ಕಾರ್ಯಗಳನ್ನು ಗಮನಿಸಿ 1891ನೆಯ ಇಸವಿಯಲ್ಲಿ ಪ್ರಜಾಪ್ರತಿನಿಧಿ ಸಭೆಗೆ ಸೇವೆ ಸಲ್ಲಿಸಲು ಯೋಗ್ಯರಾದ ವ್ಯಕ್ತಿಗಳ ಪಟ್ಟಿಯಲ್ಲಿ ಶ್ರೀಯುತರ ಹೆಸರಿದ್ದುದು ತಿಳಿದು ಬರುತ್ತದೆ.

ರೈಸ್ ಅವರ ಅಧ್ಯಯನಶೀಲತೆ, ಕನ್ನಡ ಸಾಹಿತ್ಯ ಪ್ರೇಮ, ಭಾಷಾ ಪ್ರೀತಿಗಳು ಅವರ ಕೃತಿಗಳಲ್ಲಿ ಮೂಡಿ ನಿಂತಿವೆ. ತಾವು ರಚಿಸಿದ ಸಾಹಿತ್ಯ ಚರಿತ್ರೆಯನ್ನು ಕರ್ಣಾಟಕ ಕವಿಚರಿತೆಯನ್ನು ಬರೆದ ಪ್ರಾಕ್ತನ ವಿಮರ್ಶ ವಿಚಕ್ಷಣ ರಾವ್ ಬಹದ್ದೂರ್ ಆರ್. ನರಸಿಂಹಾಚಾರ್ಯರಿಗೆ ಅರ್ಪಿಸಿದ್ದಾರೆ. ಇದು ರೈಸ್ ಅವರ ವಿದ್ವತ್ಪ್ರೀತಿ ಮತ್ತು ನಿಷ್ಪಕ್ಷಪಾತ ಮನೋಭಾವ, ಕನ್ನಡ ವಿದ್ವಾಂಸರಿಗೆ ತೋರಿಸುವ ಪ್ರೀತ್ಯಾದರ ಗುಣಗಳಿಗೆ ಸಂಕೇತವಾಗಿವೆ.

ರೈಸ್ ಅವರು ಹ್ಯಾರೋದಲ್ಲಿ ಮೃತರಾದ ವಿಷಯ ತಿಳಿದ ನಂತರ ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆಯಲ್ಲಿ ತುಂಬಾ ಗೌರವಪೂರ್ವಕವಾಗಿ ಅವರನ್ನು ಸ್ಮರಿಸಲಾಗಿದೆ. ಅವರ ಸ್ಮರಣೆಯ ಕಾರ್ಯಕ್ರಮದಲ್ಲಿ ಕನ್ನಡ ನಾಡಿನ ಪ್ರಧಾನಗಣ್ಯರು ಭಾಗವಹಿಸಿ ಅವರನ್ನು ಕೊಂಡಾಡಿದ್ದಾಗಿ ತಿಳಿದುಬರುತ್ತದೆ. ರೈಸ್ ಅವರು ಕನ್ನಡ ನಾಡಿನ ಸಾಹಿತ್ಯ ಮತ್ತು ಸಾಂಸ್ಕೃತಿಕ ಜಗತ್ತಿನಲ್ಲಿ ಪಡೆದ ಗಣ್ಯ ಸ್ಥಾನವನ್ನು ಇದು ಸೂಚಿಸುತ್ತದೆ.

(ಆಧಾರ: ಡಾ. ಸಿ. ಯು. ಮಂಜುನಾಥ್ ಅವರ ಇ.ಪಿ. ರೈಸ್ ಅವರ ಕುರಿತಾದ ಲೇಖನ)

Sunday, April 24, 2011

ಮಾನವ-ದೇವಮಾನವ

ಈ ದಿನ ಸತ್ಯ ಸಾಯಿಬಾಬ ಅಸ್ತಂಗತರಾದಂತಹ ದಿನ. ಎಲ್ಲಾ ಭಕ್ತಸಮೂಹ ನೋವುಣ್ಣಲೇಬೇಕಾದಂತಹ ದಿನ. ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸೋಣ. ಈತ ಮಾನವ ಅಷ್ಟೆ ತನ್ನ ವ್ಯಕ್ತಿತ್ವದ ಕಾರಣ ಜನರ ಮನಸ್ಸಿನಲ್ಲಿ ದೇವಮಾನವನಾದ. ಇಂತಹ ಉದಾಹರಣೆ ನಮ್ಮ ಮಹಾಕಾವ್ಯಗಳಲ್ಲೇ ದೊರೆಯುತ್ತದೆ. ರಾಮ, ಕೃಷ್ಣ ಇವರು ಸಹ ಮಾನವರು ವ್ಯಕ್ತಿತ್ವದ ಮತ್ತು ಮಾಡಿದ ಕಲ್ಯಾಣಕಾರ್ಯದಿಂದಾಗಿ ಜನರ ಮನಸ್ಸಿನಲ್ಲಿ ಇಂದಿಗೂ ದೇವ ಮಾನವರಾಗಿ ಪೂಜಿಸಲ್ಪಡುತ್ತಿದ್ದಾರೆ. ಇಂತಹ ವ್ಯಕ್ತಿತ್ವಗಳು ಪ್ರಪಂಚದ ಎಲ್ಲಾ ಕಡೆ ಇದ್ದೇ ಇರುತ್ತವೆ. ನಮ್ಮಲ್ಲು ಸಹ ಇಂತಹ ಗುಣ ಇರುತ್ತೇ ನಾವುಗಳು ಬೆಳೆಯಲು ಬಿಡುವುದಿಲ್ಲ ಕಾರಣ ಮನುಷ್ಯ ಸಹಜ ಆಸೆಗಳು. ಎಲ್ಲರಲ್ಲೂ ಈ ಗುಣ ಬರಲೆಂದು ಆಶಿಸೋಣ. ಬಾಬ ಎಲ್ಲರಿಗೂ ಪ್ರೇರಣೆಯಾಗಲಿ

Friday, April 22, 2011

ಬೀchi


ನನಗೆ ತುಂಬಾ ಸಂತೋಷ ತಂದಿರುವ ಸಂಗತಿಗಳಲ್ಲಿ ಬೀchi ಅವರ ಪುಸ್ತಕಗಳು ಪ್ರಮುಖವಾದದ್ದು. ಹಾಗಾಗಿ ಅವರ ಪುಸ್ತಕ ತಿಂಮನ ತಲೆ, ಬೆಳ್ಳಿ ತಿಂಮ ನೂರೆಂಟು ಹೇಳಿದ ನನಗೆ ನಿರಂತರ ಸಂಗಾತಿ. ಇಂದು ನನಗೆ ಇವೆಲ್ಲಕ್ಕೂ ಮೀರಿದ ಸಂತಸದ ದಿನ. ‘ಏಪ್ರಿಲ್ 23’ ಬೀchi ಅವರ ಹುಟ್ಟಿದ ಹಬ್ಬ ಎಂದು ಬೀchi ಅವರ ಬಗ್ಗೆ ಸುಂದರವಾದ ಬರಹ ಓದಿದೆ. ಬೀchi ಅವರ ಬಗ್ಗೆ ಅಷ್ಟು ಸುಂದರವಾಗಿ ಇಂದು ಅ.ರಾ. ಮಿತ್ರರ ಹೊರತು ಮತ್ತಿನ್...ನಾರು ಬರೆಯಲು ಸಾಧ್ಯ. ಇದೋ ಈ ಬರಹ ಮಿತ್ರರದು. ಇನ್ನು ನೀವುಂಟು, ಬೀಚಿ ಉಂಟು, ಮಿತ್ರರುಂಟು. ನಾನು ಇಲ್ಲಿ ಕೇವಲ ಟೈಪಿಗ.

ನಿನ್ನಂತೆ ನೀನಾಗು ನಿನ್ನ ನೀ ಅರಿ ಮೊದಲು
ಚೆನ್ನೆಂದು ದೊಡ್ಡವರ ಅನುಕರಿಸ ಬೇಡ
ಏನಾಯ್ತು ಮರಿಕತ್ತೆ? ಚೆಲುವಿತ್ತು, ಮುದ್ದಿತ್ತು
ತನ್ನಪ್ಪನಂತಾಗಿ ಹಾಳಾಯ್ತೊ ತಿಂಮ. (- ಅಂದನಾ ತಿಂಮ)

ಬರಹಗಾರನ ವೈಯಕ್ತಿಕ ಪ್ರತಿಭೆ ಜಡ ಅನುಕರಣೆಯ ಮರಳಿನಲ್ಲಿ ಇಂಗಿ ಹೋಗಬಾರದು. ಇದು ಬೀchi ದೃಷ್ಟಿಕೋನ. ಈ ದೃಷ್ಟಿಯನ್ನು ಕಂಡೇ ಇರಬೇಕು ತುಂಬ ಗಂಭೀರ ಬರಹಗಾರರಾದ ಶಂ.ಬಾ. ಜೋಶಿ ಯವರು ಬೀchiಯವರನ್ನು “ತನ್ನನ್ನು ತಾನೇ ರೂಪಿಸಿಕೊಂಡ ಅಪೂರ್ವ ಸ್ವಯಂಭೂ” ಎಂದು ವರ್ಣಿಸಿದ್ದಾರೆ. ಬೀchi ಪ್ರಸಿದ್ಧ ಇಂಗ್ಲಿಷ್ ಕಾದಂಬರಿಗಳ ನಗೆತುಣುಕುಗಳ ಸಾಮಗ್ರಿಯನ್ನು ಕನ್ನಡಕ್ಕೆ ಇಳಿಸಿದ್ದಾರೆ ನಿಜ. ಆದರೆ ಅವರ ಭಾಷಾಪ್ರಜ್ಞೆಯಲ್ಲಿ ಕನ್ನಡದ ಛಾಪು ಇದೆ. ಶಬ್ದದ ವಿಶಿಷ್ಟ ಸತ್ವದಿಂದಲೇ ವಿಚಾರಗಳನ್ನು ಬೆದಕಬೇಕೆಂಬ ಆರೋಗ್ಯಕರ ವ್ಯಂಗ್ಯಶೀಲತೆಯಿದೆ. “ಮಾನವನ ಬಾಳು ಗೋಪುರದ ಗಡಿಯಾರ. ತಲೆ ಎತ್ತಿದರೆ ಮಾತ್ರ ಕಾಣುತ್ತದೆ. ಎತ್ತಲು ತಲೆ ಎಂಬುದೊಂದುಬೇಕು. ಎತ್ತಬೇಕು ಅಂಬುದು ಅದಕ್ಕೆ ತೋಚಬೇಕು, ಅಲ್ಲವೇ? ಅದಕ್ಕಾಗಿ ಮನುಷ್ಯನೆಂಬ ಪ್ರಾಣಿ ಊರ್ಧ್ವಮುಖಿ. ಗಡಿಯಾರ ಅಂಬುದು ಅದಕ್ಕೆ ತೋಚಬೇಕು. ಬರೀ ಕಂಡರೂ ಸಾಲದು. ಅದರ ಮುಳ್ಳುಗಳ ಲೆಕ್ಕಾಚಾರ ತಿಳಿದಿರಬೇಕು.” ಹೀಗೆ ಶಬ್ದಮುಖವಾಗಿ ಪ್ರತಿಮಾತ್ಮಕವಾಗಿ ಬರೆಯುವ ಶಕ್ತಿಯನ್ನು ಅವರು ರೂಢಿಸಿಕೊಂಡಿದ್ದಾರೆ. ಈ ಬಗೆಯ ವ್ಯಂಗ್ಯ ಶೈಲಿಯೇ ಅವರ ದೊಡ್ಡ ಕೊಡುಗೆ.

ಭಾಷೆಯ ಬೇರುಗಳೊಳಗೆ ನೀರಿನಂತೆ ಇಳಿದುಕೊಂಡು ಅದರ ಒಳಮೈಯ ಇಕ್ಕಟ್ಟಾದ ಸ್ಥಳಗಳನ್ನೆಲ್ಲ ಶೋಧಿಸುವ ಕೆಲಸ ಕೈಗೊಂಡವರು ಬೀchi. ಇದರ ಪರಿಣಾಮವಾಗಿ ಶಬ್ದದ ಬೆನ್ನುಹತ್ತಿ ಅದರ ವಕ್ರಗತಿಗಳನ್ನೆಲ್ಲ ತೋರಿಸಿಕೊಡುವುದು, ಹಾಸ್ಯದೃಷ್ಟಿಯನ್ನಿರಿಸಿಕೊಂಡು ಶಬ್ದದ ಆಚೆ ಈಚೆಯ ವಿಚಾರದ ಮಗ್ಗುಲುಗಳನ್ನು ತೋರಿಸಿ ಕೊಡುವುದು ಅವರಿಗೆ ಸಾಧ್ಯವಾಯಿತು. ಈ ದೃಷ್ಟಿಯಿಂದ ಹಾಸ್ಯ ವಿಶ್ಲೇಷಣೆ ಶಬ್ಧಶೋಧಗಳೆರಡನ್ನೂ ಒಂದೇ ಮೈಯಲ್ಲಿ ಸಾಧಿಸಿದ ಕೀರ್ತಿ ಬೀchiಯವರಿಗೆ ಸಲ್ಲುತ್ತದೆ. ಆಧುನಿಕ ಕನ್ನಡ ಹಾಸ್ಯಪರಂಪರೆ ಬಹುಮುಖಿಯಾದದ್ದು. ಆರ್. ನರಸಿಂಹಾಚಾರ್, ಗೊರೂರು, ಪಡುಕೋಣೆ ರಮಾನಂದರಾಯ ಇವರುಗಳಲ್ಲಿ ಹಾಸ್ಯ ಪ್ರಸಂಗಗಳ ನವಿರಾದ ವಸ್ತು ವಿವರಣೆಯಿದೆ. ರಾಶಿ, ರಾಜರತ್ನಂ, ಎ. ಎನ್. ಮೂರ್ತಿರಾವ್, ಲಾಂಗೂಲಾಚಾರ್ಯ ಇವರುಗಳ ಹಾಸ್ಯದಲ್ಲಿ ಆತ್ಮೀಯತೆಯ ಲೆಪವಿದೆ. ನಾಡಿಗೇರ್ ಸೋದರರು, ನಾ. ಕಸ್ತೂರಿ, ಎನ್ಕೆ, ಎಚ್. ಕೆ. ರಂಗನಾಥ್ ಇವರುಗಳು ಶುದ್ಧಹಾಸ್ಯದ ಅಬ್ಬರದ ದರ್ಶನ ಮಾಡಿಕೊಡುತ್ತಾರೆ. ಶ್ರೀರಂಗ, ಕಾರಂತ ಇವರ ಹಾಸ್ಯದ ಹಿನ್ನೆಲೆಯಲ್ಲಿ ವಿಚಾರದ ಬೆಟ್ಟವೇ ಇರುತ್ತದೆ. ರಾ.ಕು, ಅ.ರಾ.ಸೇ, ದಾಶರಥಿ ದೀಕ್ಷಿತ್, ಸುನಂದಮ್ಮ ಮೊದಲಾದವರು ತಮ್ಮ ವಿಚಿತ್ರ ದೃಷ್ಟಿಕೋನದಿಂದ ಹಾಸ್ಯಪ್ರಕರಣಗಳನ್ನು ಮಥಿಸುತ್ತಾರೆ. ಬೀchi ಶಬ್ದದ ಬೆನ್ನು ಹಿಡಿದು ಹಾಸ್ಯದ ಒಳಸೆಲೆಗಳನ್ನು ಶೋಧಿಸುವ ಅನನ್ಯ ಪಂಥದ ಬರಹಗಾರರಾಗಿದ್ದಾರೆ.

“ಬೀchi” ಕನ್ನಡ-ಹೂಣ ಲಿಪಿಗಳ ಎರಡು ತಲೆ ಕರುವಿನಂತೆ ವಿಚಿತ್ರವಾಗಿ ಕಾಣುವ ಈ ಹೆಸರು ನಿಜವಾಗಿ ಅಚ್ಚಕನ್ನಡದ ‘ಬೀಚಿ’ಯೇ. ಅವರ ನಿಜವಾದ ಹೆಸರು ಹೆದರಿಕೆ ಹುಟ್ಟಿಸುವಂತ ಬಲಶಾಲಿಯಾದ ಹೆಸರೇ. ರಾಯಸಂ ಭೀಮಸೇನರಾವ್. ಈ ಬಗ್ಗೆ ಅವರೇ ವಿವರಣೆ ನೀಡಿದ್ದಾರೆ.

“ಪಾರ್ಥಸಾರಥಿ ಪಾಚು ಆಗುತ್ತಾನೆ. ನಾರಾಯಣ ನಾಣಿ. ಅಂತೆಯೇ ಭೀಮಸೇನ ಬೀಚಿಯಾದ ಅವರಿವರ ಬಾಯಲ್ಲಿ, ಹಾಗಾದುದೇ ಒಳಿತಾಯಿತು. ಸದಾ ಕರುಳಿನ ಬೇನೆಯಿಂದ ನರಳುವ ಈ ಹೊಟ್ಟೆರೋಗಿ ‘ಭೀಮಸೇನ’ ಹೇಗಾದಾನು?” ಹೀಗಾಗಿ ಈ ‘ಕಾಚಿಕಡ್ಡಿ ಪೈಲುವಾನ’ ಅವರ ಅಮ್ಮನ ಮುದ್ದಿನ ನುಡಿಗತ್ತರಿಗೆ ಸಿಲುಕಿ ‘ಬೀಚಿ’ಯಾದ.

ಅವರ ಜೀವನ ಚರಿತ್ರೆಯ ಒಂದು ಪುಟ ಅವರೇ ಬರೆದ ‘ಬೀchi ಲೈಫೋಗ್ರಫಿ’ಯಲ್ಲಿದೆ.

ಹುಟ್ಟಿದ ತಾರೀಖು : 23.4.1913

ಶಿಕ್ಷಣ : ಎಸ್.ಎಸ್.ಎಲ್.ಸಿ ಪಾಸು 1930

ನೌಕರಿಗೆ ಸೆರಿದ್ದು : “ ಪೋಲೀಸ್ ಖಾತೆಯಲ್ಲಿ ಅಟೆಂಡರ್ 1931

ಪ್ರಥಮ ಲೇಖನ ಮುದ್ರಣ : ಪ್ರಜಾಮತ (ಮದ್ರಾಸ್) 1933

ಮದುವೆ : ಜಮಖಂಡಿ ಶ್ರೀನಿವಾಸಾಚಾರ್ಯರ ಮಗಳು ಸೌ. ಸೀತಾಬಾಯಿ ಅವರೊಡನೆ. 1933 (ಶ್ರಾವಣ)

ಪ್ರಥಮ ಸಂತಾನ : 1940

ಪ್ರಥಮ ಪುಸ್ತಕ ಪ್ರಕಟಣೆ : 1946

ಕೆಲಸದಲ್ಲಿ ಬಡತಿ : ಸೂಪರಿಂಟೆಂಡೆಂಟ್, ಸ್ಪೆಷಲ್ ಬ್ರಾಂಚ್ ಸಿ.ಐ.ಡಿ ಬೆಂಗಳೂರು (ರಾಜ್ಯದಲ್ಲಿ ಈ ತರಹದ ಹುದ್ದೆ ಇದೊಂದೇ)

ಪಿಂಚಣಿ : 1968

ಪಿಂಚಣಿ ಹಣ : ರೂ. 133

ವಿಶೇಷ ಉಲ್ಲೇಖನೀಯ ಸಂಗತಿಗಳು : ಹುಟ್ಟುವುದು, ಮದುವೆ

ಬೀchi ಹರಪನಹಳ್ಳಿಯ ಹುರುಪಿನ ಜೀವ. ಅವರೇ ತಮ್ಮ ಬಾಲ್ಯದ ಬಗೆಗೂ ಹೇಳಿಕೊಂಡಿದ್ದಾರೆ. “ಪರಾವಲಂಬಿಯ ಜೀವಿ ನಾನಲ್ಲ. ಹುಟ್ಟುತ್ತಲೇ ತಂದೆ, ತಾಯಿ ಇಲ್ಲ. ಬಡವರಾದ ಸೋದರತ್ತೆ ಅವರು ಉಳಿದ ತಂಗಳ ಹಾಕಿ ಸಾಕಿದರು.... ಎಸ್ಸೆಸ್ಸೆಲ್ಸಿ ಮುಗಿಸುವುದೇ ಒಂದು ಪ್ರಯಾಸವಾಯಿತು. ಶಾಲೆಗೆ ಫೀಜು ಕಟ್ಟುವುದಕ್ಕೆ ಗತಿಯಿಲ್ಲದೆ ಅಲ್ಲಿಗೆ ಮುಗಿಯಿತು ವಿದ್ಯಾಭ್ಯಾಸದ ಕತೆ”. ಅವರಿಗೆ ಬಾಲ್ಯದಲ್ಲಿ ಅಕ್ಷರಾಭ್ಯಾಸವಾದದ್ದು ತೆಲುಗಿನಲ್ಲಿ. ಸೋದರಮಾವ ವೃತ್ತಿಯಲ್ಲಿ ಅರ್ಚಕರು. ಅವರ ಮನೆಯಲ್ಲಿ ‘ಮೇಲುಕರಟದ ತುರಿಯಿಂದ ಬೆಳೆದವನು’ ಎಂದು ಬೀchi ಅಭಿಮಾನದಿಂದ ಹೇಳಿಕೊಳ್ಳುತ್ತಾರೆ. ಅವರು ಕನ್ನಡ ಕಲಿತದ್ದೇ ಎಸ್.ಎಸ್.ಎಲ್.ಸಿ ವೇಳೆಗೆ (ಅಥವಾ ಆಗಲೂ ಅಲ್ಲ. I learnt Kannada after I became an author – ಇದು ಅವರದೇ ಮಾತು). ಪೋಲೀಸ್ ಇಲಾಖೆಯಲ್ಲಿ ಅಖಂಡವಾಗಿ ಮೂವತ್ತೆರಡು ವರ್ಷ ಸೇವೆ. ಬಹುಶಃ ಇವರ ಹುಡುಕುಗಣ್ಣು, ಚುಚ್ಚು ಮಾತು, ಝಾಡಿಸುವ ಮನೋಧರ್ಮ ಇವೆಲ್ಲ ಬಹುಮಟ್ಟಿಗೆ ಆ ಡಿಪಾರ್ಟ್ ಮೆಂಟಿನ ಪ್ರಸಾದ ಎನಿಸುತ್ತದೆ. ಇದನ್ನು ಮನಸ್ಸಿನಲ್ಲಿರಿಸಿಕೊಂಡೇ ಎಂ.ಎನ್. ವ್ಯಾಸರಾವ್ ಬೀಚಿಯವರನ್ನು ಕುರಿತ ಒಂದು ಪದ್ಯದಲ್ಲಿ:

ಕಾಲಮಾನಗಳನಾಚೆ ನೂಕಿ
ಸವೆದು ಸತ್ತವುಗಳ ಬೆದಕಿ ಕೆದಕಿ
ಸದಾ ತನಿಖೆಯಲ್ಲಿರುವ ಮನಸು

ಎಂದಿದ್ದಾರೆ.

ಬೀchi ಬರವಣಿಗೆಗೆ ಇಳಿದದ್ದು ಒಂದು ಆಕಸ್ಮಿಕವೇ. ಅದರಲ್ಲೂ ಹಾಸ್ಯದ ಬರವಣಿಗೆಗೆ ಅವರಿಗೆ ಪ್ರೇರಣೆ ಬಂದದ್ದು ಇನ್ನೊಂದು ಆಕಸ್ಮಿಕ. ಹಾಸ್ಯಪ್ರಜ್ಞೆಯೇನೋ ಅವರಲ್ಲಿ ಧಾರಾಳವಾಗಿತ್ತು. ಆದ್ದರಿಂದ ಏನನ್ನೂ ಬರೆಯದಿದ್ದರೂ ಹಾಸ್ಯಗಾರರನ್ನಾಗಿರುವವರನ್ನು ಅವರು ಮೆಚ್ಚಿದ್ದಾರೆ:

“ಎಂದು ನೀನು ಹಾಸ್ಯ ಲೇಖಕನಾದಿ? ಎಂಬುದಕ್ಕೆ ಉತ್ತರ ಸಿಕ್ಕೀತು. ಆದರೆ ನೀನೆಂದು ಹಾಸ್ಯಗಾರನಾದಿ ಎಂಬ ಪ್ರಶ್ನೆಗೆ ಉತ್ತರ ಹೇಳುವುದು ತುಂಬಾ ಕಷ್ಟ. ಹಾಸ್ಯಗಾರ ಅವನು ಹುಟ್ಟುವ ಮೊದಲೇ ಹಾಸ್ಯಗಾರನಾಗಿರುತ್ತಾನೆ. ಆಮೇಲೆ ಅವನು ಲೇಖಕನಾದರೆ ಹಾಸ್ಯ ಲೇಖಕನಾಗುತ್ತಾನೆ. ಇಲ್ಲದಿದ್ದರೆ ಬರಿಯ ಹಾಸ್ಯಗಾರನಾಗಿಯೇ ಉಳಿಯುತ್ತಾನೆ. ಅಂಥ ಹುಟ್ಟು ಹಾಸ್ಯಗಾರರು ನಮ್ಮಲ್ಲಿ ಹೇರಳವಾಗಿದ್ದಾರೆ.

“ಬೀchi ಅವರಿಗೆ ಬರೆಯುವ ಅಭ್ಯಾಸ ಇರಲಿಲ್ಲ ಮಾತ್ರವಲ್ಲ. ‘ಕನ್ನಡದಲ್ಲಿ ಬರೆಯುವುದು ಓದುವುದು ಅಷ್ಟೇನೂ ಗೌರವದ ಕೆಲಸವಲ್ಲ ಎಂಬ ಭಾವನೆಯೂ ಇತ್ತು. ಕನ್ನಡ ಸಾಹಿತ್ಯ ಗ್ರಂಥಗಳ ಪರಿಚಯವೇ ಇಲ್ಲದಿದ್ದ ಬೀchiಯಂತಹ ತರುಣನನ್ನು ಸಾಹಿತ್ಯ ಜಗತ್ತಿನ ಗುರುತ್ವಾಕರ್ಷಣೆಗೆ ಒಳಪಡಿಸಿದವರೆಂದರೆ ಅ.ನ.ಕೃಷ್ಣರಾಯರು. ಅವರ ಸಂಧ್ಯಾರಾಗ ಬೀchiಯವರ ಮನಸ್ಸನ್ನು ಸೆಳೆದ ಕಾದಂಬರಿ. ಈ ಕಾದಂಬರಿಯ ಪರಿಚಯವಾದುದೂ ಒಂದು ಸ್ವಾರಸ್ಯಕರ ವಿಷಯವೇ. ಇವರ ಪತ್ನಿ ಕನ್ನಡ ಭಕ್ತೆ. ಕನ್ನಡ ಪುಸ್ತಕ ಓದುವ ಹವ್ಯಾಸ ಆಕೆಯದು. ಬೀchi ಅಲ್ಪ ಸ್ವಲ್ಪ ತಿರಸ್ಕಾರದ ಭಾವದಿಂದಲೇ ಒಂದು ಪುಸ್ತಕದ ಅಂಗಡಿಗೆ ಹೋದರಂತೆ. “ಒಂದು ಕನ್ನಡದ ಪುಸ್ತಕ ಕೊಡಿ. ಯಾವುದಾದರೂ ಚಿಂತೆಯಿಲ್ಲ. ರೈಲ್ವೆ ಟೈಮ್ ಟೇಬಲ್ ಪುಸ್ತಕ ಕೊಟ್ಟರೂ ಅಡ್ಡಿಯಿಲ್ಲ. ಆದರೆ ಕನ್ನಡದಲ್ಲಿ ಅಚ್ಚಾಗಿರಬೇಕು” ಎಂದರಂತೆ! ಪುಣ್ಯಕ್ಕೆ ಅಂಗಡಿಯಾತ ಕೊಟ್ಟ ಪುಸ್ತಕ ‘ಸಂಧ್ಯಾರಾಗ’. ಅದನ್ನು ಓದಿದ ಬೀchi ಸದ್ದಿಲ್ಲದೆ ಕನ್ನಡದ ಪ್ರೇಮಿಯಾದರು. ಬಳ್ಳಾರಿಯಲ್ಲಿದ್ದ ಗೆಳೆಯ ಕೋ. ಚೆನ್ನಬಸಪ್ಪ ಅವರ ಕಾಟದಿಂದ, ಕೋ.ಚೆ. ಸಂಪಾದಕರಾಗಿದ್ದ ರೈತವಾಣಿ ವಾರಪತ್ರಿಕೆಯಲ್ಲಿ ‘ಬೇವಿನಕಟ್ಟೆ ತಿಂಮ’ ಎಂಬ ಸ್ಥಿರ ಶೀರ್ಷಿಕೆ ಯಲ್ಲಿ ಹಾಸ್ಯ ಲೇಖನಗಳನ್ನು ಬರೆದು ಅನಂತರ ಪಾ.ಪು.ಅವರ ‘ವಿಶಾಲ ಕರ್ನಾಟಕ’ ದಿನಪತ್ರಿಕೆಯಲ್ಲಿ ‘ಕೆನೆ ಮೊಸರು’ ಸ್ಥಿರ ಶೀರ್ಷಿಕೆಯಡಿಯಲ್ಲಿ ನಿತ್ಯವೂ ಹರಟೆಗಳನ್ನು ಬರೆದರು.

ಅವರು ನಾಟಕ ಪ್ರೇಮಿಯೂ ಆಗಿದ್ದರು. ಒಂದು ನಾಟಕ ಬರೆದು ಬಳ್ಳಾರಿಯ ಜನರ ಕೆಂಗಣ್ಣಿನ ಕೃಪೆಗೆ ಪಾತ್ರರಾದರು. ಅವರು ಬರೆದ ಮೊದಲ ನಾಟಕ ’ಯದ್ವಾತದ್ವಾ ಅಥವಾ ದೇವರ ಆತ್ಮಹತ್ಯೆ’. ಬರೆದ ಹುರುಪಿನಲ್ಲೇ ಗೆಳೆಯರನ್ನು ಕೂಡಿಸಿ ಬಳ್ಳಾರಿಯಲ್ಲಿ ಆಡಿಯೂ ಬಿಟ್ಟರು. ಬೀchiಯವರೇ ದೇವರ ವೇಷ ಹಾಕಿ ರಂಗಭೂಮಿಯ ಮೇಲೆ ಟೈಯಿಂದ ಉರುಲು ಹಾಕಿಕೊಂಡು ‘ಆತ್ಮಹತ್ಯೆ’ ಮಾಡಿಕೊಂಡರು. ಮರುದಿನ ಅವರ ಅವಸ್ಥೆ ಬೇಡ. ಉತ್ತಮ ಜಾತಿಯವರೆಂದು ಭ್ರಮಿಸಿಕೊಂಡ ಅನೇಕರು ಬೀchiಯ ಮೇಲೆ ತಮ್ಮ ಜುಟ್ಟಿನಿಂದಲೇ ಕೆಂಡ ಕಾರಿದರಂತೆ. ಆ ಜನಗಳ ತಪೋಜ್ವಾಲೆ ಎಂದೋ ತಣ್ಣಗಾಗಿದ್ದರಿಂದ ಬೀchiಯವರು ಬಳ್ಳಾರಿ ರಾಘವರ ಸಕಾಲಿಕ ಸಹಾಯದಿಂದ ಉಳಿದುಕೊಂಡರಂತೆ.

1946ರಲ್ಲಿ ಪ್ರಕಟಿತಗೊಂಡ ‘ರೇಡಿಯೋ ನಾಟಕಗಳು’ದಿಂದ ಹಿಡಿದು ತಾವು ತೀರಿಕೊಳ್ಳುವವರೆಗೂ ಬೀchi ಬರವಣಿಗೆಗೆ ವಿಶ್ರಾಂತಿ ಎಂಬುದೇ ಇರಲಿಲ್ಲ. ಐವತ್ತಕ್ಕೂ ಹೆಚ್ಚಿನ ಕೃತಿಗಳನ್ನು ನೀಡಿದ ಅವರ ರಚನೆಗಳಲ್ಲಿ ಹಲವಾರು ನಿರಂತರವಾಗಿ ಮುದ್ರಣದ ಭಾಗ್ಯವನ್ನು ಕಂಡಿವೆ. ‘ತಿಂಮನ ತಲೆ’ಯಂತೂ ಇಂದಿನ ದಿನಗಳಲ್ಲೂ ಪುನರ್ ಮುದ್ರಣ ಕಾಣುತ್ತಲೇ ಸಾಗಿದೆ. ಬೀchi ಸತ್ಕಾರ ಸಮಿತಿಯವರು ಅವರ ಅರವತ್ತನೇ ಹುಟ್ಟುಹಬ್ಬದ ಸನ್ಮಾನ ಸಂದರ್ಭದಲ್ಲಿ ಬೆಳೆಗಾಂವಿಯಿಂದ ಮಿರ್ಜಿ ಅಣ್ಣಾರಾಯ, ಕೃಷ್ಣಕೊಲ್ಹಾರ ಕುಲಕರ್ಣಿ ಇವರುಗಳ ಸಂಪಾದಕತ್ವದಲ್ಲಿ ಹೊರತಂದಿರುವ ‘ತಿಂಮಾಯಣ’ದ ಪರಿವಿಡಿಗಳಲ್ಲಿ ಅವರ ಕೃತಿಗಳ ಪೂರ್ಣವಿವರ ಇದೆ. ಬೀchiಯವರ ಬರವಣಿಗೆಯನ್ನು ಮುಖ್ಯವಾಗಿ ಕಾದಂಬರಿ, ನಾಟಕ, ಕಥೆ, ಹರಟೆ, ಪದ್ಯ ಎಂದು ವಿಂಗಡಿಸಬಹುದು. ಅವರ ‘ದಾಸಕೂಟ’ ಕನ್ನಡದಲ್ಲಿಯೇ ಮೊತ್ತ ಮೊದಲ ಹಾಸ್ಯಪ್ರಧಾನ ಕಾದಂಬರಿ. ಇದರ ಒಂದು ಪಾತ್ರದ ಬೆಳವಣಿಗೆ ಮುಂದಿನ ‘ಸತೀ ಸೂಳೆ’ ಕಾದಂಬರಿಯ ವಸ್ತು. ‘ಸರಸ್ವತಿ ಸಂಹಾರ’, ‘ಖಾದಿ ಸೀರೆ’, ‘ಬೆಂಗಳೂರು ಬಸ್ಸು’, ‘ದೇವನ ಹೆಂಡ’, ‘ಏರದ ಬಳೆ’, ಮೇಡಮ್ಮನ ಗಂಡ’, ‘ಟೆಂಟ್ ಸಿನಿಮಾ’, ‘ಆರಿದ ಚಹಾ’, ‘ಬಿತ್ತಿದ್ದೇ ಬೇವು’ ಮೊದಲಾದ ಮೂವತ್ತಕ್ಕೂ ಹೆಚ್ಚಿನ ಕಾದಂಬರಿಗಳನ್ನು ಅವರು ಬರೆದಿದ್ದಾರೆ. ಕನ್ನಡದಲ್ಲಿ ಬರುತ್ತಿದ ಬರಿಯ ಕಾಲ್ಪನಿಕವಾದ ಅಸಂಬದ್ಧ ಪತ್ತೆದಾರಿ (detective) ಕಾದಂಬರಿಗಳ ವ್ಯಂಗ್ಯಾನುಕರಣದ ಫಲವಾಗಿ ಅವರ ‘ಸತ್ತವನು ಎದ್ದು ಬಂದಾಗ’ ಎಂಬ ‘Defective’ ಕಾದಂಬರಿ ಮೂಡಿತು. ಸಾಯದೆ ಇದ್ದವನನ್ನು ಶೋಧಿಸುವ ಮೋಜಿನ ಈ ಕಾದಂಬರಿ ತುಂಬ ಜನಪ್ರಿಯವಾಯಿತು. ಅನಕೃ ಅವರನ್ನು ತಮ್ಮ ಗುರುವಾಗಿ ಸ್ವೀಕರಿಸಿದ ಬೀchi ತಮ್ಮ ವಿಶಿಷ್ಟ ವ್ಯಂಗ್ಯಶೈಲಿಯನ್ನು ಮಾತ್ರ ಉಳಿಸಿಕೊಂಡು ಜನಪ್ರಿಯತೆ, ರೋಚಕತೆ, ರೋಮಾಂಚಕತೆಗಳ ವೈಭವದ ಜಾಡಿನಲ್ಲಿ ನುಗ್ಗಿಬಿಟ್ಟರು.

ಕಾದಂಬರಿಕಾರ ಬೀchiಯವರು ಕಂಡ ಜಗತ್ತು ಬೇರೆ. ಪೋಲೀಸ್ ವಿಭಾಗದಲ್ಲಿದ್ದುದರಿಂದ ಸಾಮಾನ್ಯರಿಗೆ ತಲಸ್ಪರ್ಶಿಯಾಗಿ ಕಾಣದ ಒಂದು ಅಧೋಲೋಕ ಇವರ ಕಣ್ಣಿಗೆ ಬಿದ್ದು ಸಮಾಜದ ಈ ವರ್ಗದ ಜನರ ಸಮಸ್ತ ಅನುಭವವನ್ನೂ ಸೆರೆಹಿಡಿಯಲು ಯತ್ನಿಸಿದ್ದಾರೆ. ಇವರೊಂದಿಗೆ ಬದುಕಿನಲ್ಲಿ ಸಂಪನ್ನತೆಯ ಪರ್ವತಗಳಂತೆ ತಲೆ ಎತ್ತಿ ನಿಲ್ಲಬಯಸುವ ಜನರನ್ನೂ ಬೆರೆಸುತ್ತಾರೆ. ಪ್ರಣಯ ಚಿಂತನದ ರೋಚಕ ವರ್ಣನೆಗೆ ಮನಸೋತಿದ್ದಾರೆ. ಕಾದಂಬರಿಕಾರರಾಗಿ ಅವರು ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ಮೌಲ್ಯಗಳ ಪತನವನ್ನು ವ್ಯಾಖ್ಯಾನಿಸುತ್ತಾರೆ. ದೇಶದ ಸ್ವಾತಂತ್ರ್ಯದ ಸಂಧಿಕಾಲದಲ್ಲಿ ಅವರು ಬರೆದ ‘ದಾಸಕೂಟ’ ಇಂಥ ಮೌಲ್ಯಗಳ ಸ್ಥಿತಿಸ್ಥಾಪಕ ಗುಣವನ್ನು ಬಯಲಿಗೆಳೆಯುವ ಒಂದು ಸಾರ್ಥಕ ಪ್ರಯತ್ನ. ರಾಷ್ಟ್ರನಾಯಕರ ಮತ್ತು ಅವರ ಅನು’ನಾಯಿ’ಗಳ ವ್ಯಕ್ತಿತ್ವದ ಸುತ್ತ ಬೆಳೆದುಕೊಳ್ಳುವ ಪೊಳ್ಳು, ಕ್ರಿಯಾ ಹೀನತೆಯನ್ನು ವಾಗಾಡಂಬರದಿಂದ ಮೆಚ್ಚಿಕೊಳ್ಳುವ ಪ್ರವೃತ್ತಿ ಮತ್ತು ಜನತೆಯ ಸಮಯ ಸಾಧಕವೃತ್ತಿ ಬಾಲಬಡುಕುತನಗಳಿಂದಾಗಿ ಮರೆಯಲ್ಲೇ ನರಳುವ ಪ್ರಾಮಾಣಿಕತೆ-ಈ ಎರಡು ರಾಜಕೀಯ ಪತನಗಳನ್ನು ಅವರು ಹಲವಾರು ಕಾದಂಬರಿಗಳಲ್ಲಿ ವಿಶ್ಲೇಷಿಸಲು ಯತ್ನಿಸಿದ್ದಾರೆ. ಸಮಾಜದ ಕಂದಾಚಾರಗಳು ಮತ್ತು ವರ್ಗ ಕಲಹಗಳು ಸಿಡಿಸುತ್ತಿರುವ ಸಾಮಾಜಿಕ ಬೇನೆಗಳನ್ನು ಅವರ ‘ಎಲ್ಲರೂ ಸಂಪನ್ನರೇ’, ‘ಸ್ವರಸ್ವತಿಯ ಸಂಹಾರ’ ಮೊದಲಾದ ಕೃತಿಗಳು ಪರಿಚಯಿಸಲು ಯತ್ನಿಸಿವೆ. ಮೂರನೆಯ ಬಗೆಯ ಕಾದಂಬರಿಗಳಲ್ಲಿ ಲೈಂಗಿಕ ಕಾಮನೆಗಳು ತುಂಬಾ ಕಟ್ಟುಪಾಡಿಗೆ ಒಳಗಾದಾಗ ಏನೇನು ವಿಕಾರಗಳನ್ನು ತಾಳಬಹುದು ಎಂಬ ವಿವರಗಳಿವೆ. ಅಸಹಜ ಮನೋವಿಕಾರಗಳಿಂದ ನರಳುವ ಪಾತ್ರಗಳ ವರ್ಣನೆ ಈ ಕಾದಂಬರಿಗಳಲ್ಲಿದೆ. ನೈಜಲೋಕದಿಂದಲೇ ಅಪಾರವಾದ ವೈವಿಧ್ಯಮಯ ಪಾತ್ರಗಳನ್ನು ಎತ್ತಿಕೊಳ್ಳಬಲ್ಲ ಬೀchi ನಾಲ್ಕು ಗ್ರಾಮು ಸೆರೆ (ಹೆಂಡ) ಎಂಟು ಗ್ರಾಮು ಕೋಪದ ಕಂಡಕ್ಟರ್ ಕೇಶವರಾಯ, ಬಸವಿ, ಬಸಮ್ಮ, ಚಂದ್ರಮ್ಮ, ಆಚಾರ್ಯರು, ಶಿವಮ್ಮ, ಇನ್ಸ್ಪೆಕ್ಟರ್ ಶಾಮಣ್ಣ, ಕಾಲೇಜು ಕನ್ಯೆಯರು ಇಂಥ ನೂರಾರು ಜೀವಂತ ಪಾತ್ರಗಳನ್ನು ಕಾಣಿಸಿಕೊಟ್ಟಿದ್ದಾರೆ.

ಬೀchiಯವರಿಗೆ ತುಂಬ ಕೀರ್ತಿ ತಂದುಕೊಟ್ಟ ಕೃತಿಗಳ ಪೈಕಿ ಹನ್ನೊಂದನೆಯ ಅವತಾರ, ರೇಡಿಯೋ ನಾಟಕಗಳು ಇವೆರಡು ಮುಖ್ಯವಾದವು. ‘ಏಕೀಕರಣ’ದಂಥ ರೇಡಿಯೋ ನಾಟಕ ಕರ್ನಾಟಕದ ಸಮಗ್ರತೆಯ ಆಶಯದಲ್ಲಿಯೂ ಅದರ ಭಾಷಾವೈವಿಧ್ಯಗಳನ್ನು ವಿಫುಲ ಸಾಕ್ಷಾಧಾರಗಳಿಂದ ಪದರ್ಶಿಸುವ ಶುದ್ಧಾಂಗ ಹಾಸ್ಯನಾಟಕ. ಹನ್ನೊಂದನೆಯ ಅವತಾರದ ಎರಡು ನಾಟಕಗಳಲ್ಲೂ “ದೇ.ಭ” ಎಂದು ಬೀchi ಜನಪ್ರಿಯಗೊಳಿಸಿದ ದೇಶಭಕ್ತ ಹೇಗೆ ನಮ್ಮ ದೇಶದ ‘ಹನ್ನೊಂದನೆಯ ಅವತಾರ’ವಾಗಿದ್ದಾನೆ ಎಂಬುದನ್ನು ತುಂಬ ಅಬ್ಬರದಿಂದ ವ್ಯಂಗ್ಯವಾಗಿ ಕಾಣಿಸಲಾಗಿದೆ. ನವರಾಜಕಾರಣಿಗಳಿಂದ ನಮ್ಮ ರಾಜಕೀಯ ಹಾಗೂ ನೈತಿಕ ಮೌಲ್ಯ ಹೇಗೆ ಕುಸಿಯುತ್ತಿವೆ ಎಂಬುದರ ಧ್ವನಿಪೂರ್ಣ ಸಮೀಕ್ಷೆಯೂ ಈ ನಾಟಕಗಳಲ್ಲಿವೆ.

ಬೀchiಯವರ ಬರವಣಿಗೆಯ ಕಾವಿನಿಂದ ಪುಷ್ಟಗೊಂಡವೆಂದರೆ ಅವರ ಹಾಸ್ಯ ಬರಹಗಳು, ಚುಟುಕಗಳು, ನಗೆಹನಿಗಳು, ತಿಂಮ ದರ್ಶನಗಳು, ತಿಂಮ ರಸಾಯನಗಳು, ಹರಟೆಗಳು, ತಿಂಮನ ತಲೆ, ಹುಚ್ಚು ಹುರುಳು, ಚಿನ್ನದ ಕಸ, ಬೆಳ್ಳಿ ತಿಂಮ ನೂರೆಂಟು ಹೇಳಿದ, ಅಮ್ಮಾವ್ರ ಕಾಲ್ಗುಣ, ಹೆಂಡತಿ ನಕ್ಕಾಗ, ಸಂಪನ್ನರಿದ್ದಾರೆ ಎಚ್ಚರಿಕೆ, ಉತ್ತರ ಭೂಪ, ತಿಂಮಿಕ್ಷನರಿ, ಅಂದನಾ ತಿಂಮ ಮೊದಲಾದ ಹಾಸ್ಯಕೃತಿಗಳು. ಬೀchi ಕಥೆ ಬರೆಯಲಿ, ಹರಟೆ ಬರೆಯಲಿ, ನಾಟಕ ಕಾದಂಬರಿಯನ್ನೇ ಬರೆಯಲಿ ಅವರ ಮೊದಲ ಗಮನ ಮಾತಿನ ಕಡೆಗೆ. ಅವರು ಮಾತನ್ನು ಹರಡಿಸುವ ಬಗೆಯನ್ನು ಅವರ ಹರಟೆಗಳು ಚೆನ್ನಾಗಿ ದುಡಿಸಿಕೊಂಡಿವೆ. ತಿಂಮನನ್ನು ನಾಯಿಗೆ ಹೋಲಿಸುತ್ತಾ ಸರಳವಾಗಿ ಆರಂಭಿಸುವ ಬೀchi ಆ ಪ್ರತಿಮೆಯ ಅಂತರಂಗಕ್ಕೇ ಇಳಿದುಬಿಡುತ್ತಾರೆ.

“ಕಚ್ಚುವುದೊಂದೇ ತಿಂಮನ ಕಸುಬಲ್ಲ. ಚಿನ್ನಾಟವಾಡುತ್ತಾ ಒಡೆಯನ ಕೈ ಮೈ ನೆಕ್ಕುತ್ತ ಮಮತೆಯ ನಾಯಿಯಂತೆ ಇಡೀ ಸಮಾಜವನ್ನೇ ನೆಕ್ಕುತ್ತಾನೆ – ತನ್ನ ಉರುಟಾದ ನಾಲಿಗೆಯಿಂದ. ಗಾಯವಿದ್ದವರಿಗೆ ನೋವಾಗಬಹುದು, ನಂಜಾಗಬಹುದು, ಗುಣವೂ ಆಗಬಹುದು. ಮನಸ್ಸಿನಂತೆ ಮಹದೇವ”.

ಇದು ‘ತಿಂಮ’ ಕನ್ನಡದಲ್ಲಿ ಬೆಳೆದ ಬಗೆಯೂ ಹೌದು. ಬೀchi ಬೆಳೆದ ಬಗೆಯೂ ಹೌದು. ಬೀchi ಎಲ್ಲ ವಿಷಯಗಳಲ್ಲೂ ತಲೆಹಾಕಲು ಒಂದು ಒಳ್ಳೆಯ ಪಾತ್ರ ಪ್ರತಿಮೆಯನ್ನು ಬಳಸಿಕೊಂಡರು. ಅದೇ ತಿಂಮ, ಬೀಚಿ ತಿಂಮತನ ಈ ಶಬ್ದಗಳ ವ್ಯಾಪಕ ಅರ್ಥದಲ್ಲಿ ಬಳಸಿದ್ದಾರೆ. ತಿಂಮ ‘ತಿಮ್ಮ’ನಾಗದೆ ‘ತಿಂಮ’ ನಾದದ್ದೂ ಒಂದು ವಿಶಿಷ್ಟ ಉಪಯೋಗಕ್ಕಾಗಿಯೇ. ಇವನು ಹುಟ್ಟಿದ್ದೂ ಒಂದು ವಿಚಿತ್ರ ಸನ್ನಿವೇಶದಲ್ಲೇ. ಬೀchi ಒಮ್ಮೆ ಆಸ್ಪತ್ರೆಯಲ್ಲಿ ನರಳುತ್ತಿದ್ದರಂತೆ. (ಅಂದರೆ ಮನೆಯಲ್ಲಿ ನರಳುತ್ತಲೇ ಇರಲಿಲ್ಲ ಎಂದರ್ಥವಲ್ಲ, ಇರಲಿ!) ಹೊತ್ತು ಕಳೆಯಲು ತುಂಬಾ ಓದುತ್ತಿದ್ದರು. ವೋಡ್ ಹೌಸ್ ನ ‘ಆಮ್ನಿ ಬಸ್’, ‘ಥ್ಯಾಂಕ್ಯೂ ಜೀವ್ಸ್’ ಇವುಗಳನ್ನು ಓದುತ್ತಿದ್ದಾಗ ಕನ್ನಡದಲ್ಲೂ ಜೀವ್ಸ್ ನಂತಹ ಒಂದು ಪಾತ್ರದ ಸೃಷ್ಟಿ ಅಗತ್ಯ ಎಂದುಕೊಂಡರು. ಫಲವಾಗಿ ‘ತಿಂಮ’ ಹುಟ್ಟಿಕೊಂಡ. ತಿಂಮನ ವಿಷಯದಲ್ಲಿ ಬೀchi ಹೀಗೆ ಹೇಳುತ್ತಾರೆ.

“ತಿಂಮ ಯಾರು?”

“ಯಾವೊಬ್ಬ ತಿರುಮಲರಾಯನನ್ನಾಗಲಿ, ತಿಂಮಪ್ಪನನ್ನಾಗಲಿ ಮುಂದಿಟ್ಟುಕೊಂಡು ಇದನ್ನು ಬರೆದಿಲ್ಲ.
ಮಕ್ಕಳ ಆಟದಲ್ಲಿ, ಗೆಳೆಯರ ಕೂಟದಲ್ಲಿ, ಹಿರಿಕಿರಿಯರ ಕಿರಿಹಿರಿತನಗಳಲ್ಲಿ, ಚತುರರ ಹೆಡ್ಡತನದಲ್ಲಿ , ದಡ್ಡರ ದೊಡ್ಡತನದಲ್ಲಿ ಕಂಡುಕೇಳಿದ ಚೇಷ್ಟೆಗಳಿಗೆಲ್ಲಾ –ಪಾಪ! ತಿಂಮನನ್ನೇ ನಾಯಕನನ್ನಾಗಿ ಒಡ್ಡಿದ್ದೇನೆ.”

“ತಿಂಮನ ನಗು ದೇಹವಾದರೆ ಆ ನಗುವಿನ ಹಿಂದೆ ಹುದುಗಿಕೊಂಡಿರುವ ನೋವೇ ಜೀವ, ಅದನ್ನು ಗುರುತಿಸದಿದ್ದರೆ ದೊರೆಯುವುದು ತಿಂಮನ ಹೆಣ ಮಾತ್ರ”.

ಬೀchiಯವರ ಭಾಷಾಸಾಧನೆಗೆ ಸಹಾಯಕವಾಗಿರುವ ಅವರ ಶ್ರವಣಾಭಿರುಚಿ ಉನ್ನತಮಟ್ಟದ್ದು. ಕೇಳಿದ ಮಾತನ್ನು ಅದೇ ಉಚ್ಛಾರ ಕ್ರಮದಲ್ಲಿ ಉಲ್ಲೇಖಿಸಲು ಅವರು ಪ್ರಯತ್ನಿಸುತ್ತಾರೆ. ಜನ ಬಳಸುವ ಒಂದು ಶಬ್ದಕ್ಕೆ ಏನೆಲ್ಲಾ ಅರ್ಥ, ಅನರ್ಥ, ಅಪಾರ್ಥ, ಹೀನಾರ್ಥ, ನಾನಾರ್ಥಗಳನ್ನು ಕಲ್ಪಿಸಬಹುದು, ಶಬ್ದವನ್ನು ಹದವಾಗಿ ತಿರುವಿ ಬಿಡಿ ಭಾಗಗಳನ್ನು ಹೇಗೆ ತೆರೆದಿಡಬಹುದು ಎಂದು ತಿಳಿಯಬಯಸುವವರು ಬೀchiಯವರ ಬರಹದ ವೈಖರಿಯನ್ನೇ ಗಮನಿಸಬೇಕು. ಹೀಗಾಗಿ ಅವರಿಗೆ ಸಾಹಿತ್ಯ ಪರಿಷತ್ತಿನ ‘ಕನ್ನಡ-ಕನ್ನಡ ನಿಘಂಟು’ ಅಂದ ಕೂಡಲೇ “ಹೆರಲಾರದ ಬಸುರಿ’ ಎಂಬ ವ್ಯಾಖ್ಯಾನ ಸಾಧ್ಯವಾಗುತ್ತದೆ. ‘ಆಕಳಿಕೆ’ಯಲ್ಲಿ ಅವರು ಲೀಲಾಜಾಲವಾಗಿ ಆsssಕಳಿಕೆಯನ್ನು ಕಾಣುತ್ತಾರೆ. ‘ಮಗಳನ್ನು ಬೆಂಗಳೂರಿಗೆ ಕೊಟ್ಟಿದೆ’ ಎಂದು ಯಾರೋ ಅಂದರೆ ‘ಆ್ಞ..... ಇಡೀ ಬೆಂಗಳೂರಿಗೆ?’ – ಎನ್ನುತ್ತಾರೆ. ಸೀತಾ ಪರೀಕ್ಷಣ ಮಾಡಿದ ರಾಮನನ್ನು ಅವರ ಭಾಷಾಮುಖ ಕಂಡಿರುವ ಬಗೆ ಹೀಗಿದೆ: “ಶ್ರೀರಾಮ ಅಸಲು ಅಕ್ಕಸಾಲಿಗ – ಹೆಂಡತಿಯನ್ನೇ ಬೆಂಕಿಯಲ್ಲಿ ಪುಟಕ್ಕೆ ಹಾಕಿ ಪರೀಕ್ಷೆ ಮಾಡಿದ.”

ಹರಟೆಯಲ್ಲಿ ಬೀchiಯವರ ಈ ಭಾಷಾವಿಲಾಸವನ್ನು ಒಂದು ಉದಾಹರಣೆಯಿಂದ ಗಮನಿಸಬಹುದು. ‘ಆ ದಡ ಕಂಡವರು’ ಎಂಬ ಹಾಸ್ಯ ಪ್ರಬಂಧ ಇದು. ಪುರೋಹಿತರೊಬ್ಬರು ಬೆಳಗ್ಗೆ ಹನ್ನೊಂದಕ್ಕೆ ನಾಯಕನ ಮನಗೆ ಬರುತ್ತಾರೆ. ಮಧ್ಯಾಹ್ನ ಹನ್ನೆರಡಕ್ಕೆ ಏಳುವ ನಾಯಕ ‘ಬಾಗಿಲು ಬಡಿದ ಜನರ’ ಮೇಲೆ ಸಿಟ್ಟು ಮಾಡಿಕೊಳ್ಳುವ ರೀತಿ ನೋಡಿ:

“ಬಾಗಿಲು ಬಡಿಯುವ ಮೂರ್ಖರಿಗೆ ಬುದ್ಧಿಕಲಿಸಬೇಕಾದರೆ ಒಂದೇ ಮಾರ್ಗ – ಬಡಗಿಯನ್ನು ಕರೆಯಿಸಿ ಆ ಬಾಗಿಲನ್ನೇ ತೆಗೆಯಿಸಿ ಒಳಕ್ಕೆ ಇಡಬೇಕು”.

ಈ ಶಾಸ್ತ್ರಿಯ ಹೆಸರು ‘ಲೋಕಕಲ್ಯಾಣಶಾಸ್ತ್ರಿ’, ‘ಪರೋಪಕಾರವೇ ತನ್ನ ಮನೋಧರ್ಮ ಎಂದು ಅವಕಾಶ ಸಿಕ್ಕಾಗಲೆಲ್ಲಾ ಹೇಳಿಕೊಳ್ಳುವ ಜಾತಿ’. ಅರ್ಥಮಾಡಿಕೊಳ್ಳಲಾರದ ಹುಂಬ. “ಹುಚ್ಚುಮುಂಡೆ ಗಂಡ ಎಂದು ಒಬ್ಬಳು ಬೈದರೆ ಅವಳು ನನ್ನನ್ನು ಗಂಡ ಅಂದಳು ಎಂದು ಹೆಮ್ಮೆಯಿಂದ ಊರಲ್ಲೆಲ್ಲ ಹೇಳಿಕೊಂಡು ಬರುವ” ಭಂಡ. ಅವರು ನಾಯಕನನ್ನು ಎಲ್ಲಿಗೋ ಕರೆದೊಯ್ಯಬೇಕಿತ್ತು. ತಾವು ಬರುವ ಮೊದಲೇ ನಾಯಕ ಸ್ನಾನ ಮಾಡಿರುತ್ತಾನೆಂದು ಅವರು ತಿಳಿದಿದ್ದರಂತೆ. ನಾಯಕ ಹೇಳುತ್ತಾನೆ:

“ತಮ್ಮ ದರ್ಶನ ಮಾಡಿಕೊಂಡ ನಂತರ ಹೇಗೂ ಮತ್ತೊಮ್ಮೆ ಸ್ನಾನ ಆಗಬೇಕು. ಎರಡೆರಡು ಸ್ನಾನ ಆಗುವುದು ತಪ್ಪಿತು ಸಧ್ಯ”. ಬಂದ ಶಾಸ್ತ್ರಿಗಳು ಅಚಾರವಂತರು. ವಯಸ್ಸಾದವರು. ಆ ದಂಡ ಕಂಡವರು. ಅವರು ಕಾಫಿ ಕುಡಿಯಲಿಲ್ಲ. ಅಮಾವಾಸ್ಯೆ ದಿನ ಮುಖ ತೊಳೆಯದೆ ನಾಯಕ ಕಾಫಿ ಹೀರುವುದನ್ನು ಆಕ್ಷೇಪಿಸಿರುತ್ತಾರೆ.

ಯಾರೋ ಹಿರಿಯ ಅಧಿಕಾರಿಗಳು ನಾಯಕನ ಸ್ನೇಹಿತರಂತೆ. ಅವರಿಂದ ಒಂದು ಉಪಕಾರ ಗಿಟ್ಟಿಸಿಕೊಳ್ಳಲು ಶಾಸ್ತ್ರಿ ಬಂದಿದ್ದರು. ನಾಯಕನಿಗೆ ಬೇಸರ.

“ಸ್ನೇಹಕ್ಕಾಗಿ ಸ್ನೇಹ ಎಂಬುದು ಬೇಡವೇ ಬೇಡ ಈ ಜೀವನದಲ್ಲಿ? ಬ್ಯಾಂಕ್ ಚೆಕ್ ನಂತೆ ಸ್ನೇಹ ವಿಶ್ವಾಸಗಳನ್ನೂ ಕ್ಯಾಷ್ ಮಾಡಿಸಬೇಕೆ?”

ಶಾಸ್ತ್ರಿಗಳು ನಾಯಕನಿಗೆ ಮೈ ಕೈ ತಗುಲಿಸುತ್ತ ಮಾತಾಡುತ್ತಾರೆ. ನಾಯಕನ ವ್ಯಾಖ್ಯಾನ: “ಅದು ಅವರ ಅಭ್ಯಾಸ. ಇದಕ್ಕೆ ಕಾರಣ, ಹೆಚ್ಚಾಗಿ ಸ್ತ್ರೀಯರೊಂದಿಗೇ ಶಾಸ್ತ್ರಿಗಳ ವ್ಯವಹಾರವೆಲ್ಲ”.

ಅವರು ಬಂದದ್ದು ಯಾಕೆ ಗೊತ್ತೆ? ನಾಯಕ ತನ್ನ ಸ್ನೇಹಿತರಾದ ಸಾಹೇಬರಿಗೆ ಹೇಳಿ ಶಾಸ್ತ್ರಿಗಳ ಅಣ್ಣನ ಮಗನನ್ನು ಕೆಲಸದಿಂದ ಡಿಸ್ ಮಿಸ್ ಮಾಡಿಸಬೇಕಂತೆ. ಕಾರಣ ಅವನು ಶಾಸ್ತ್ರಿಗಳ ವೈರಿಯಾಗಿದ್ದ.

ಅಣ್ಣನ ಮಗ ಅಲ್ಲವೆ? ಅವನಿಂದ ತೊಂದರೆಯಾಗಿದೆಯೇ ಎಂಬ ನಾಯಕನ ಪ್ರಶ್ನೆಗೆ ಅವರ ಉತ್ತರ:
“ಅವನು ಸುಖವಾಗಿ ಇರುವುದೇ ನಮಗೆ ತೊಂದರೆ ಅಲ್ಲವೇನಯ್ಯಾ? ಅವನನ್ನು ಕೆಲಸದಿಂದ ತೆಗೆಸಿಹಾಕಿ ಅಣ್ಣನನ್ನ ಗತಿಕಾಣದ ಹಾಗೆ ಮಾಡಿಸಬೇಕು ನಾನು. ಭಿಕ್ಷೆ ಬೇಡಬೇಕು ಅವನು. ನಾವು ನೋಡಬೇಕು ಅದನ್ನ”.

ವಾಸ್ತವವಾಗಿ ಈ ಪ್ರಬಂಧದಲ್ಲಿ ವಸ್ತು ಹೆಚ್ಚೇನೂ ಇಲ್ಲ. ಆದರೆ ಅದರ ಸುತ್ತ ಕಾವು ಕೊಡುತ್ತ ಅಡ್ಡಾದಿಡ್ಡಿ ಹರಡಿಕೊಳ್ಳುತ್ತ ಹೋಗುವ ‘ಭಾಷಾಮುಖ’ವನ್ನು ಗಮನಿಸಿದರೆ ಅವರ ಶೈಲಿಯ ಪರಿಚಯ ಮಾಡಿಕೊಳ್ಳಬಹುದಾಗಿದೆ. ಆ ಮುದುಕ ಬ್ರಾಹ್ಮಣ, ಆಚಾರವಂತ ಅಂತ ಹೇಳಿಕೊಳ್ಳೋ ಬ್ರಾಹ್ಮಣ ನಿಜವಾಗಿ ಅಂದು ತರ್ಪಣ ಬಿಟ್ಟು ಬಂದದ್ದು ತನ್ನ ಮಾನವೀಯ ಗುಣಗಳಿಗೆ ಎಂಬುದನ್ನು ಈ ಪ್ರಬಂಧ ಸ್ಪಷ್ಟವಾಗಿ ಸಾರುತ್ತದೆ. ಬೀಚಿಯವರು ವಸ್ತು ವ್ಯಾಖ್ಯಾನದ ಜತೆಗೆ ಪ್ರಾಸಂಗಿಕವಾಗಿ ಬರುವ ಸಂಪರ್ಕದ ಮಾತುಗಳನ್ನು ತಿರುಚಿ ನಾನಾ ಮೂಲೆಗಳಿಗೆ ಎಳೆದೊಯ್ಯುವ ಶಬ್ದವ್ಯಾಖ್ಯಾನವನ್ನೂ ಮಾಡುತ್ತ ಹೋಗುತ್ತಾರೆ. ಅವರ ಬರಹಗಳ ವಿಶಿಷ್ಟ ದ್ರವ್ಯ ಇದೇ. ಉತ್ತಮ ವಾಗ್ಮಿಯೂ ಆಗಿದ್ದ ಬೀchi ಈ ಭಾಷಾ ವೈಶಿಷ್ಟ್ಯವನ್ನೇ ಮೆರೆಸಿ ಜನರ ಮನಸ್ಸನ್ನೂ ಗೆದ್ದುಕೊಂಡಿದ್ದರು. ಐವತ್ತಕ್ಕೂ ಹೆಚ್ಚಿನ ಗ್ರಂಥಗಳನ್ನು ಬರೆದ ಬೀchiಯವರ ಯಾವ ಪುಸ್ತಕ ತೆರೆದರೂ ಇಂಥ ಬೀchiಯವರದೆಂದು ಗುರುತಿಸಬಲ್ಲಂಥ-ವಿಶಿಷ್ಟಶೈಲಿಯ ದರ್ಶನವಾಗುತ್ತದೆ.
--
ಬೀchiಯವರು ನಿಧನರಾದದ್ದು ಡಿಸೆಂಬರ್ 7, 1980ರಲ್ಲಿ. ಈ ಮಹಾನ್ ಬರಹಗಾರನಿಗೆ ನಮ್ಮ ಸಾಷ್ಟಾಂಗ ನಮನ.

Thursday, April 21, 2011

ತ.ರಾ.ಸು



ಇಂದು ಕನ್ನಡದ ಮೇರು ಲೇಖಕರಾದ ತ.ರಾ.ಸು ಅವರ ಜನ್ಮದಿನ. ಅವರು ಏಪ್ರಿಲ್ 21, 1920ರಲ್ಲಿ ಚಿತ್ರದುರ್ಗ ಜಿಲ್ಲೆಯ ಮಲೆಬೆನ್ನೂರಿನಲ್ಲಿ ತಳುಕಿನ ವೆಂಕಣ್ಣಯ್ಯನವರ ಮನೆತನದಲ್ಲಿ ಜನಿಸಿದರು.(ಈಗ ಅದು ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿದೆ ಎಂದು ಕೆಲವು ಗೆಳೆಯರು ನನ್ನನ್ನು ತಿದ್ದಿದ್ದಾರೆ. ಬಹುಷಃ ಅಂದು ಈ ಊರು ಚಿತ್ರದುರ್ಗ ಜಿಲ್ಲೆಯಲ್ಲಿ ಇದ್ದಿರಬಹುದು. ಆದರೂ ತರಾಸು ಅವರು ಚಿತ್ರದುರ್ಗವನ್ನು ತ...ಮ್ಮದು ಎಂದು ಭಾವಿಸಿದ್ದರಿಂದ ಚಿತ್ರದುರ್ಗವನ್ನು ಹಾಗೇ ಉಳಿಸಿದ್ದೇನೆ).

ಪ್ರತಿ ಕಲ್ಲೂ ಇತಿಹಾಸದ ವೀರರ ಕಥೆಯನ್ನೂ ಇತಿಹಾಸದ ದುರಂತ ಕಥೆಯನ್ನೂ ಸಾರಿ ಹೇಳುವ ಚಿತ್ರದುರ್ಗದಲ್ಲಿ ಹುಟ್ಟಿದ ಸುಬ್ಬರಾಯರು ಆ ಸ್ಥಳದೊಂದಿಗೆ ಅತ್ಯಂತ ಆತ್ಮೀಯವಾದ ಸಂಬಂಧವನ್ನೂ ಬೆಳೆಸಿಕೊಂಡರು. ತಮ್ಮ ಕೊನೆಯ ಕಾದಂಬರಿ ‘ದುರ್ಗಾಸ್ತಮಾನ’ದ ಮುನ್ನುಡಿಯಲ್ಲಿ ಅವರು ಹೀಗೆ ಬರೆದರು: “ಚಿತ್ರದುರ್ಗದ ಜನರಿಗೆ ಚಿತ್ರದುರ್ಗ ಎಂದರೆ ಒಂದು ಊರಲ್ಲ, ಕೋಟೆಯಲ್ಲ, ಬೆಟ್ಟವಲ್ಲ, ತಮ್ಮ ಕರುಳಿಗೆ ಹೊಂದಿಕೊಂಡು ಬೆಳೆದ ಜೀವಂತ ವಸ್ತು.” ಚಿತ್ರದುರ್ಗದ ಉತ್ಸಾಹೀ ಇತಿಹಾಸಕಾರರಾದ ಹುಲ್ಲೂರು ಶ್ರೀನಿವಾಸ ಜೋಯಿಸರು ಹುಡುಗನ ಚಿತ್ರದುರ್ಗದ ಅಭಿಮಾನಕ್ಕೆ ನೀರೆರೆದರು. ಮುಂದೆ ತ.ರಾ.ಸು ಐತಿಹಾಸಿಕ ಕಾದಂಬರಿಗಳನ್ನು ಒಂದು ವಿಶಿಷ್ಟ ಮಾಧ್ಯಮ ಮಾಡಿಕೊಳ್ಳಲು ಇದು ಕಾರಣವಾದದ್ದಷ್ಟೇ ಅಲ್ಲ ಸಾಮಾನ್ಯ ಜನರನ್ನು ಮೀರಿ ನಿಂತ, ಸಿಡಿಲಿನ ಚೈತನ್ಯವನ್ನು ತುಂಬಿಕೊಂಡ, ಅಸಾಧಾರಣ ಭಾವಗಳ-ರಾಗಗಳ ದೈತ್ಯವ್ಯಕ್ತಿಗಳು ಇದರಿಂದ ತ.ರಾ.ಸು ಗೆ ವಾಸ್ತವಿಕ ಸ್ತ್ರೀ ಪುರುಷರಾದರು. ಅವರ ಕಾದಂಬರಿಗಳ ಪಾತ್ರಗಳ ಸೃಷ್ಟಿಯ ಮೇಲೆ ಇದು ಪ್ರಭಾವವನ್ನು ಬೀರಿತು.

ತಳುಕಿನ ವೆಂಕಣ್ಣಯ್ಯನವರ ಮನೆತನಕ್ಕೆ ಸಾಹಿತ್ಯ ಸಂಸ್ಕೃತಿಗಳಲ್ಲಿ ವಿಶೇಷ ಅಭಿಮಾನ. ಇವರ ಹಿರಿಯರು ಯಕ್ಷಗಾನದಲ್ಲಿ ತೀವ್ರ ಆಸಕ್ತಿಯಿದ್ದವರು. ದೊಡ್ಡಪ್ಪ ವೆಂಕಣ್ಣಯ್ಯನವರು ವಿದ್ವಾಂಸರು. ಸದಭಿರುಚಿಯ ತೂಕದ ಮಾತಿನ ವಿಮರ್ಶಕರು. ತಂದೆ ರಾಮಸ್ವಾಮಿಯವರಿಗೆ ಸಾಹಿತ್ಯದಲ್ಲಿ ಆಸಕ್ತಿ. ಚಿಕ್ಕಪ್ಪ ಶಾಮರಾಯರು ವಿದ್ವಾಂಸರು, ಒಳ್ಳೆಯ ವಿಮರ್ಶಕರು.

ಸ್ವಾತಂತ್ರ್ಯ ಸಂಗ್ರಾಮವನ್ನು ಹತ್ತಿರದಿಂದ ಕಂಡವರು, ಅನಂತರ ಅದರಲ್ಲಿ ಭಾಗವಹಿಸಿ ಸೆರೆಮನೆವಾಸವನ್ನು ಅನುಭವಿಸಿದವರು ತ.ರಾ.ಸು. ಬೆಂಗಳೂರಿಗೆ ಬಂದು ಪತ್ರಿಕಾವೃತ್ತಿಯನ್ನು ಆರಿಸಿಕೊಂಡರು. ಸೇರಿದ್ದು ‘ವಿಶ್ವಕರ್ನಾಟಕ’ ಪತ್ರಿಕೆಯ ಕಚೇರಿಯನ್ನು. ಅದು ಸ್ವಾತಂತ್ರ್ಯದ ಹೋರಾಟದಲ್ಲಿ ತಮ್ಮ ಆಸ್ತಿಯನ್ನೆಲ್ಲಾ ಕಳೆದು ಆದರ್ಶದ ಬೆನ್ನುಹತ್ತಿ ಧೀರಜೀವನ ನಡೆಸುತ್ತಿದ್ದ ತಿರುಮಲೆ ತಾತಾಚಾರ್ಯ ಶರ್ಮರ ಪತ್ರಿಕೆ. ಜೊತೆಗೆ ಮತ್ತೊಂದು ಧೀರ ಜೀವ ಸಿದ್ಧವನಹಳ್ಳಿ ಕೃಷ್ಣಶರ್ಮ. ಇಬ್ಬರದೂ ಶಕ್ತಿಯುತವಾದ ತೇಜಸ್ವಿ ಶೈಲಿ. ತ.ರಾ.ಸು ಕೃಷ್ಣಶರ್ಮರಿಗೆ ಹತ್ತಿರವಾದರೂ, ಅವರ ಧ್ಯೇಯಗಳನ್ನೂ ಜೀವನ ರೀತಿಯನ್ನೂ ಬರಹವನ್ನೂ ಮೆಚ್ಚಿಕೊಂಡರು. ಅವರಂತೆಯೇ, ಬರಹವನ್ನೇ ವೃತ್ತಿಯನ್ನಾಗಿ ಮಾಡಿಕೊಂಡರು. ಪತ್ರಿಕೋದ್ಯಮಿಯಾಗಿ ಅರೆಹೊಟ್ಟೆ ಊಟಮಾಡಿ ಆದರ್ಶತ್ವ ಕೇಳುವ ಬೆಲೆಯನ್ನು ತೆತ್ತರು.

ತ.ರಾ.ಸು ಬೆಂಗಳೂರಿಗೆ ಬಂದು ‘ವಿಶ್ವ ಕರ್ನಾಟಕ’ ಸೇರಿದ ದಿನಗಳಲ್ಲಿ ಅ.ನ.ಕೃ ಪ್ರಗತಿಶೀಲ ಪಂಥವನ್ನು ನಿರ್ಮಿಸುತ್ತಿದ್ದರು. ಅ.ನ.ಕೃ ಅವರು ತ.ರಾ.ಸು ಮೇಲೆ ಗಾಢವಾದ ಪ್ರಭಾವ ಬೀರಿದರು. ತರುಣ ಸಾಹಿತಿಗಳಿಗೆ ಪ್ರೋತ್ಸಾಹ ಕೊದುವುದರಲ್ಲಿ ಸಂತೋಷವನ್ನು ಕಾಣುತ್ತಿದ್ದ ಅ.ನ.ಕೃ ಈ ತರುಣ ಪ್ರತಿಭೆಯನ್ನು ಮೆಚ್ಚಿಕೊಂಡರು. ತ.ರಾ.ಸು ಅ.ನ.ಕೃ ಅವರಲ್ಲಿ ಗಾಢವಾದ ಗೌರವವನ್ನು ಬೆಳೆಸಿಕೊಂಡರು. ಪ್ರಗತಿಶೀಲ ಪಂಥದ ದೃಷ್ಟಿ, ಆದರ್ಶಗಳು ಅವರಿಗೆ ಮೆಚ್ಚಿಗೆಯಾದವು. ಆ ಚಳವಳಿಯ ಅತಿರಥಮಹಾರಥರಲ್ಲಿ ಒಬ್ಬರಾದರು.

1946ರಲ್ಲಿ ತ.ರಾ.ಸು ಅವರ ಮೊದಲನೆಯ ಕಥಾಸಂಕಲನ ‘ರೂಪಸಿ’ ಪ್ರಕಟವಾಯಿತು. ಇದೇ ಸರಿಸುಮಾರಿಗೆ ಅವರ ಮೊದಲನೆಯ ಕಾದಂಬರಿ ‘ಮನೆಗೆ ಬಂದ ಮಹಾಲಕ್ಷ್ಮಿ’ ಪ್ರಕಟವಾಯಿತು. ಈ ಕಥೆಗಳನ್ನು ಹೇಳುವಾಗ ತ.ರಾ.ಸು ಒಬ್ಬ ಹುಟ್ಟು ಕಥೆಗಾರನಾಗಿಯೂ, ಉದ್ದೇಶಪೂರ್ಣ ಕಲೆಗಾರನಾಗಿಯೂ ಕಾಣುತ್ತಾರೆ. ಇಲ್ಲಿಂದ ಮುಂದೆ ಮುವ್ವತ್ತಾರು ವರ್ಷಗಳ ಕಾಲ ತ.ರಾ.ಸು ಸಾಹಿತ್ಯ ರಚನೆ ಮಾಡಿದರು. ಅತ್ಯಂತ ಜನಪ್ರಿಯ ಬರಹಗಾರರಲ್ಲಿ ಒಬ್ಬರಾದರು. ಒಟ್ಟು ಅವರ ಹೆಸರನ್ನು ಹೊತ್ತ ಕೃತಿಗಳು ತೊಂಬತ್ತಾರು. ಈ ಸಂಖ್ಯೆಯಲ್ಲಿ ಅವರು ಸಂಪಾದಕರಾಗಿ ಸಿದ್ಧಮಾಡಿದ ಕೃತಿಗಳೂ ಇವೆ. ನಾಲ್ಕು ಕಥೆಗಳ ಸಂಗ್ರಹಗಳು ಎಪ್ಪತ್ತು ಕಾದಂಬರಿಗಳು. ಅ.ನ.ಕೃ ಅವರನ್ನು ಮುಕ್ತವಾಗಿ ಪ್ರಶಂಸಿಸುವ ‘ಅ.ನ.ಕೃ’, ‘ಮದಾಂಬವರಿ’ ಭಾಷಾಂತರ, ಮೂರು ರೇಡಿಯೋ ರೂಪಕಗಳ ಸಂಗ್ರಹ, ‘ಮಹಾಶ್ವೇತೆ’, ‘ಮೃತ್ಯು ಸಿಂಹಾಸನ’ ಎನ್ನುವ ಐತಿಹಾಸಿಕ ನಾಟಕಗಳು ಇಂತಹ ಹಲವಾರು ಕೃತಿಗಳೂ ಅವರ ಲೇಖನಿಯಿಂದ ಮೂಡಿಬಂದವು.

ತ.ರಾ.ಸು ಅವರ ಅನೇಕ ಕಾದಂಬರಿಗಳು ಚಲನಚಿತ್ರಗಳಾಗಿ ಲಕ್ಷಾಂತರ ಮಂದಿ ಪ್ರೇಕ್ಷಕರ ಮೆಚ್ಚಿಗೆಯನ್ನು ಗಳಿಸಿದವು. ‘ಹಂಸಗೀತೆ’ಯು ಹಿಂದಿಯಲ್ಲಿ ‘ಬಸಂತ ಬಹಾರ್’ ಆಗಿ ಅಖಿಲ ಭಾರತ ಮಟ್ಟದಲ್ಲಿ ಮೆಚ್ಚಿಗೆಯನ್ನು ಗಳಿಸಿತು. ‘ಹಂಸಗೀತೆ’ ಕನ್ನಡದಲ್ಲೂ ಚಿತ್ರವಾಗಿತ್ತು. ‘ನಾಗರಹಾವು’ ಗಳಿಸಿದ ಅಪಾರ ಯಶಸ್ಸು, ಕನ್ನಡ ಚಿತ್ರರಂಗದಲ್ಲಿ ಮೂಡಿಸಿದ ಹಲವಾರು ಪ್ರತಿಭೆ ವೈಶಿಷ್ಟ್ಯಗಳು ಇತ್ಯಾದಿಗಳು ಅಜರಾಮರವಾದದ್ದು. ಅವರ ಇನ್ನೂ ಬಹಳಷ್ಟು ಕಾದಂಬರಿಗಳು ಕೂಡಾ ಚಲನಚಿತ್ರಗಳಾಗಿದ್ದವು ಎಂಬುದು ನಾಡಿನ ಜನತೆಗೆ ತಿಳಿದಿರುವ ಸಂಗತಿ. ತ.ರಾ.ಸು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾಗಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಅವರನ್ನು ಸನ್ಮಾನಿಸಿತು. ಅವರ ‘ದುರ್ಗಾಸ್ತಮಾನ’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಸಂದಿತು. (ಈ ಮನ್ನಣೆಯಿಂದ ಸಂತೋಷಪಡಲು ಅವರು ಬದುಕಿರಲಿಲ್ಲ ಎನ್ನುವುದೇ ವಿಷಾದದ ಸಂಗತಿ).

ತ.ರಾ.ಸು ಹಲವಾರು ಕಥೆಗಳನ್ನು ಬರೆದರೂ ಅದೇ ಅವರ ಮುಖ್ಯ ಮಾಧ್ಯಮವಾಗಲಿಲ್ಲ. ‘೦-೦=೦’, ‘ಒಂದು ತುಂಡು ಸುದ್ಧಿ’, ‘ಇನ್ನೊಂದು ಮುಖ’ ಇವು ತ.ರಾ.ಸು ಸಣ್ಣಕಥೆಯ ಮಾಧ್ಯಮದ ಮೇಲೆ ಪ್ರಭುತ್ವಕ್ಕೆ ಸಾಕ್ಷಿ. ಆದರೆ ಮುಖ್ಯವಾಗಿ ಅವರ ಮಾಧ್ಯಮ ಕಾದಂಬರಿ. ಮತ್ತೊಂದು ಪ್ರಮುಖ ವಿಚಾರವೆಂದರೆ, ಪ್ರಾಯಶಃ ಬಹು ಶ್ರೇಷ್ಠ ನಾಟಕಕಾರರಾಗಬಹುದಾಗಿದ್ದ ತ.ರಾ.ಸು ತಮ್ಮ ಕಾಲದ ಸಂದರ್ಭದಲ್ಲಿ ಕಾದಂಬರಿ ಮಾಧ್ಯಮವನ್ನು ಬಳಸಿಕೊಂಡರು ಎನ್ನುವ ಮಾತನ್ನು ಹೇಳಬೇಕು. ಅವರ ಕಾದಂಬರಿಗಳಲ್ಲಿ ಕಥಾವಸ್ತು ಸಾಗುವುದು ಶಕ್ತಿಯುತವಾದ ದೃಶ್ಯಗಳ ಮೂಲಕ. ಪಾತ್ರ-ಪಾತ್ರಗಳ ಪರಸ್ಪರ ಪ್ರತಿಕ್ರಿಯೆ, ಪ್ರಭಾವ ಅಥವಾ ಘರ್ಷಣೆ ಈ ದೃಶ್ಯಗಳಲ್ಲಿ ಸ್ಪಷ್ಟವಾಗುತ್ತದೆ.

ತ.ರಾ.ಸು ಅವರ ಕಾದಂಬರಿಗಳನ್ನು ಮೂರು ವರ್ಗಗಳಾಗಿ ವಿಂಗಡಿಸಬಹುದು. ಮೊದಲನೆಯದು, ಪ್ರಗತಿಶೀಲ ಪಂಥದ ಉತ್ಸಾಹೀ ಅತಿರಥರಾಗಿ ಬರೆದ ಕಾದಂಬರಿಗಳು. ‘ಕೇದಿಗೆ ವನ’, ‘ಜೀತದ ಜೀವ’, ‘ಪುರುಷಾವತಾರ’, ‘ಬೆಂಕಿಯ ಬಲೆ’, ‘ಬಿಡುಗಡೆಯ ಬೇಡಿ’, ‘ಮುಂಜಾವಿನ ಮುಂಜಾವು’, ‘ರಕ್ತತರ್ಪಣ’ ಇವೆಲ್ಲಾ ಈ ವರ್ಗದ ಕೃತಿಗಳು.

ಎರಡನೆಯದು ಐತಿಹಾಸಿಕ ಕಾದಂಬರಿಗಳು. ‘ಕಂಬನಿಯ ಕುಯಿಲು’, ‘ರಕ್ತರಾತ್ರಿ’, ‘ತಿರುಗುಬಾಣ’, ‘ಮೃತ್ಯು ಸಿಂಹಾಸನ’, ‘ದುರ್ಗಾಸ್ತಮಾನ’ ಇವೆಲ್ಲಾ ಚಿತ್ರದುರ್ಗದ ಉಜ್ವಲ ಚರಿತ್ರೆಗೆ ಮುಡಿಪು. ಇವಲ್ಲದೆ ‘ನೃಪತುಂಗ’, ‘ವಿಜಯೋತ್ಸಾಹ’, ‘ಶಿಲ್ಪಶ್ರೀ’, ‘ಸಿಡಿಲಮೊಗ್ಗು’, ‘ಕೀರ್ತಿನಾರಾಯಣ’, ಇಂತಹ ಚಾರಿತ್ರಿಕ ಕಾದಂಬರಿಗಳನ್ನು ಬರೆದರು.

ಮೂರನೆಯದು ಇತರ ಕಾದಂಬರಿಗಳು. ಈ ಸ್ವರೂಪದ ಕಾದಂಬರಿಗಳು ಬಹುಮಟ್ಟಿಗೆ ಪ್ರಗತಿಶೀಲ ಪಂಥದ ಕಕ್ಷೆಯಲ್ಲಿ ಬರುತ್ತವೆ. ಅವರ ಬಹು ಜನಪ್ರಿಯ ಕೃತಿಗಳಲ್ಲಿ ಹಲವು ‘ನಾಗರಹಾವು’, ‘ಚಂದನದ ಗೊಂಬೆ’, ‘ಚಂದವಳ್ಳಿಯ ತೋಟ’, ‘ಚಕ್ರತೀರ್ಥ’, ‘ಹಂಸಗೀತೆ’ ಇತ್ಯಾದಿ. ಈ ಕಾದಂಬರಿಗಳಲ್ಲಿ ವ್ಯಕ್ತಿ-ವ್ಯಕ್ತಿಗಳ ಸಂಬಂಧ, ವ್ಯಕ್ತಿತ್ವ ರೂಪುಗೊಳ್ಳುವುದು ಅಲ್ಲಿನಮುಖ್ಯ ಆಸಕ್ತಿಯಾಗಿ ಹೊರಹೊಮ್ಮುತ್ತವೆ.

ತ.ರಾ.ಸು ಅವರ ಐತಿಹಾಸಿಕ ಕಾದಂಬರಿಗಳ ಪ್ರಾತಿನಿಧಿಕವಾಗಿ ‘ದುರ್ಗಾಸ್ತಮಾನ’ವನ್ನೇ ಪರಿಗಣಿಸಬಹುದು. ಅವರ ಎಲ್ಲ ಐತಿಹಾಸಿಕ ಕಾದಂಬರಿಗಳಂತೆ ಇದೂ ಘಟನೆಗಳಿಂದ ತುಂಬಿಹೋಗಿವೆ. ಇಡೀ ಕೃತಿ ಪೌರುಷದ ಜಯಘೋಷವಾಗಿ, ಅಗ್ನಿಪರ್ವತವೊಂದು ಪುರುಷರೂಪ ತಾಳಿ ನಾಯಕನಾಗಿ ಬಂದಂತೆ ಭಾಸವಾಗುತ್ತದೆ. ಅಂತಹ ಚೈತನ್ಯಮಯ ಮನುಷ್ಯ ಮದಕರಿನಾಯಕ. ದುರ್ಗ-ನಾಯಕರ ಅವಿನಾಭಾವ ಕೃತಿಯಲ್ಲಿ ರೂಪ ತಾಳುತ್ತದೆ. ದುರ್ಗವೇ ನಾಯಕ. ನಾಯಕನೇ ದುರ್ಗ. ಇಡೀ ರಾಜ್ಯದ ಹಂಬಲ ಅವನನ್ನು ಬೆಳೆಸುತ್ತದೆ. ಅವನು ರಾಜ್ಯದ ಅಂತರ್ ಶಕ್ತಿಯ ಮೂರ್ತಿಯಾಗುತ್ತಾನೆ. ಅವನ ಅವನತಿ ಪ್ರಾರಂಭವಾಗುವುದು ರಾಜ್ಯದ ಮತ್ತು ರಾಜಮನೆತನದ ಕಲ್ಯಾಣವನ್ನೇ ಬಯಸುವ ದಾರ್ಮಿಕ ಗುರುಗಳಿಬ್ಬರಿಂದಲೂ ದೂರವಾದಾಗ. ಇದರ ನಂತರ ಅವನ ಇಂದ್ರಿಯ ಸಂಯಮವೂ ಸಡಿಲಾಗುತ್ತದೆ. ‘ಕೀಚಕತನ’ ಪ್ರಕಟವಾಗುತ್ತದೆ ಅತ್ಯಂತ ಬುದ್ಧಿವಂತನಾದ ಪ್ರಧಾನಿಯೂ ದೂರವಾಗುತ್ತಾನೆ. ಒಂದು ಧರ್ಮ ಸೂಕ್ಷ್ಮಕ್ಕೆ ಸಿಲುಕಿದಾಗ (ಹೈದರಾಲಿ ದುರ್ಗವನ್ನು ಮುತ್ತಿದಾಗ ‘ಪಂಜಾ’ ತೊಳೆಯಲು ತಾವು ಊರ ಹೊರಕ್ಕೆ ಹೋಗಬೇಕೆಂದು ಕೆಲವರು ಮುಸ್ಲಿಮರು ಪ್ರಾರ್ಥನೆಯನ್ನು ಸಲ್ಲಿಸಬೇಕೆ?) ಸರಿಯಾದ ಮಾರ್ಗದರ್ಶನ ಮಾಡುವವರಿಲ್ಲದೆ ತಪ್ಪು ಹೆಜ್ಜೆ ಇಡುತಾನೆ. ಅಪಾತ್ರಕ್ಕೆ ತೋರಿದ ಉದಾತ್ತತೆಯ ದುರಂತವಾಗುತ್ತದೆ ಅವನ ಬಾಳು. ಪೌರುಷಕ್ಕೆ ನೀತಿ, ವ್ಯವಹಾರ ಜ್ಞಾನ ಎರಡೂ ಜೊತೆಗಾರರಾಗಬೇಕು . ಈ ಜೊತೆ ತಪ್ಪಿದಾಗ ದುರಂತ ಅನಿವಾರ್ಯ.

ಶಿವರಾಮ ಕಾರಂತರು ದುಡಿಮೆಯನ್ನು ಮೌಲ್ಯ ಮಾಡಿದಂತೆ ತ.ರಾ.ಸು ಪೌರುಷವನ್ನು ಒಂದು ಮೌಲ್ಯವನ್ನಾಗಿ ಮಾಡಿದರು.

ತ.ರಾ,ಸು ಅವರ ಇತರ ಕಾದಂಬರಿಗಳಲ್ಲಿ ಮಾನವೀಯ ಸಂಬಂಧಗಳೇ ಮುಖ್ಯ. ‘ಚಂದವಳ್ಳಿಯ ತೋಟ’, ‘ಚಂದನದ ಗೊಂಬೆ’, ‘ಚಕ್ರತೀರ್ಥ’, ಮೊದಲಾದ ಕಾದಂಬರಿಗಳಲ್ಲೆಲ್ಲ ಕಾಣುವುದು ಅಂತಃಕರಣದ ಮಹತ್ವ, ಪಾವಿತ್ರ್ಯ. ಈ ವರ್ಗದ ಬಹುಮಟ್ಟಿನ ಕಾದಂಬರಿಗಳಲ್ಲಿ ಅತಿ ಅಹಂಭಾವ, ಛಲ ಇವು ಸುಂದರಾವಾದ ಬಾಳನ್ನು ಕೆಡಿಸುತ್ತವೆ. ಈ ವರ್ಗದಲ್ಲಿ ‘ಹಂಸಗೀತೆ’ ಒಂದು ವಿಶಿಷ್ಟ ಕೃತಿ. ಪರಿಪಕ್ವತೆಗೆ ಗಟ್ಟಿತನದ ಯಾತ್ರೆ ಇದು. ಈ ಯಾತ್ರೆಯ ಹಾದಿ ಸಂಗೀತ. ಬಂಡೆಯಂತಹ ವ್ಯಕ್ತಿತ್ವದ ವೆಂಕಟಸುಬ್ಬಯ್ಯ ಕ್ರಮೇಣ ಮನುಷ್ಯನಾಗಿ, ಕಡೆಗೆ ದೇವರಿಗೇ ಮೀಸಲಾದ ಚೇತನವಾಗಿ ಬೆಳೆಯುವ ಪ್ರಕ್ರಿಯೆ ಕಾದಂಬರಿಯ ವಸ್ತು. ಕಥೆಯನ್ನು ಬೇರ ಬೇರೆ ಸ್ಥಳಗಳ ಮತ್ತು ಸ್ತರಗಳ ಪಾತ್ರಗಳಿಂದ ಹೇಳಿಸುವ ತಂತ್ರದಿಂದಾಗಿ ಕಥೆ ಭೂತ-ವರ್ತಮಾನಗಳ ನಡುವೆ ತೂಗುವಂತಾಗುತ್ತದೆ. ವಸ್ತುವನ್ನು ಸಾಕಷ್ಟು ದೂರದಿಂದ ಹಲವು ಕೋನಗಳಿಂದ ನೋಡುವುದು ಸಾಧ್ಯವಾಗುತ್ತದೆ.

ತ.ರಾ.ಸು ಅವರ ಒಟ್ಟು ಕಾದಂಬರಿಗಳ ಬಗ್ಗೆ ಹೇಳುವುದಾದರೆ ಉತ್ಕಟತೆ, ಭಾವತೀವ್ರತೆ ಅವರ ಸಾಹಿತ್ಯದಲ್ಲಿ ಎದ್ದು ಕಾಣುವ ಲಕ್ಷಣ. ಈ ಗುಣವೇ ಅವರ ಸ್ನೇಹ, ಪ್ರೇಮ, ವಿಶ್ವಾಸ, ಅಭಿಮಾನಗಳ ತಂಪನ್ನೂ, ಸತ್ವವನ್ನೂ ಒಂದು ಸನ್ನಿವೇಶದಲ್ಲಿ ಹಿಡಿದಿರುವುದನ್ನು ಸಾಧ್ಯಮಾಡಿತು. ಎಲ್ಲಕ್ಕಿಂತ ಮೊದಲಾಗಿ ತ.ರಾ.ಸು ಹೃದಯವಂತಿಕೆಯ ಕಾದಂಬರಿಕಾರ. ಅವರ ಐತಿಹಾಸಿಕ ಕಾದಂಬರಿಗಳಲ್ಲಂತೂ ಮುಖ್ಯ ಪಾತ್ರಗಳು ಜೀವನದಲ್ಲಿ ನಾವು ಕಾಣುವ ಮನುಷ್ಯರನ್ನು ಮೀರಿದವು. ಇತರ ಕಾದಂಬರಿಗಳಲ್ಲೂ ಒಬ್ಬ ವೆಂಕಟಸುಬ್ಬಯ್ಯನಾಗಲಿ, ಒಬ್ಬ ರಾಮಾಚಾರಿಯಾಗಲಿ ಇಂತಹ ಪಾತ್ರವೇ. ಪೌರುಷ, ಅಂತಃಕರಣ ಇವಿದ್ದರೆ ಮನುಷ್ಯ ಎಂತಹ ಎತ್ತರಕ್ಕೆ ಬೆಳೆಯಬಲ್ಲ ಎಂಬ ಕನಸು ಅವರ ಅನೇಕ ಕಾದಂಬರಿಗಳ ಕೇಂದ್ರದಲ್ಲಿದೆ.

ತ.ರಾ.ಸು ಅವರು ತಮ್ಮ ಬರವಣಿಗೆಯಲ್ಲಿ ಗಾದೆಯ ಮಾತಿನಂತೆ ಕೆಲವೇ ಮಾತುಗಳಲ್ಲಿ ಗಾಢ ಭಾವನೆಯನ್ನೋ, ಜೀವನದ ಪ್ರತಿಕ್ರಿಯೆಯನ್ನೋ ಅಡಗಿಸಬಲ್ಲವರು. ಅದೃಶ್ಯವಾದ ಆದರೆ ನಾಡಿನ ಜೀವನದಲ್ಲಿ ಪ್ರಭಾವಶಾಲಿಯಾದ ಜನತೆಯ ಸಂಸ್ಕೃತಿಗೆ ಹತ್ತಿರವಾಗಿದ್ದವರು ಅವರು. ಉದಾತ್ತತೆಯನ್ನು, ತ್ಯಾಗವನ್ನು, ಹೃದಯವಂತಿಕೆಯನ್ನು ಮೆಚ್ಚುವ ಸಂಸ್ಕೃತಿ ಇದು. ಇದರಿಂದಲೇ ಸಾಮಾನ್ಯ ಓದುಗ ತ.ರಾ.ಸು ಬರಹಕ್ಕೆ ರೋಮಾಂಚನಗೊಂಡ. ವಾಸ್ತವಿಕತೆ, ರೊಮ್ಯಾಂಟಿಸಿಸಂ, ಆದರ್ಶತ್ವ ಮೂರರ ಸಂಗಮ ತ.ರಾ.ಸು. ಅವರ ಸಾಹಿತ್ಯಸೃಷ್ಟಿ.

ತ.ರಾ.ಸು ಅವರು 1984ರ ಏಪ್ರಿಲ್ 10ರಂದು ಈ ಲೋಕವನ್ನಗಲಿದರು. ಈ ಶ್ರೇಷ್ಠ ಕಾದಂಬರಿಕಾರರಿಗೆ ನಮ್ಮ ಶ್ರದ್ಧಾಪೂರ್ಣ ನಮನ.

Sunday, April 17, 2011


ಪಂಜೆ ಮಂಗೇಶರಾಯರು ತಮ್ಮ ‘ಕಿರುಗತೆ-ಕಿರುಗವನಗಳು’ ಮೂಲಕ ಹೊಸಸಾಹಿತ್ಯದ ಹರಿಕಾರರ...ಲ್ಲಿ ಒಬ್ಬರೆಂದು ಚಿರಸ್ಮರಣೀಯರು. ರಾಮಪ್ಪಯ್ಯ ಮತ್ತು ಶಾಂತಾದುರ್ಗಾ ದಂಪತಿಗಳ ಮಗನಾಗಿ ಮಂಗೇಶರಾಯರು 1874ನೆಯ ಫೆಬ್ರವರಿ 22ರಂದು ಬಂಟವಾಳದಲ್ಲಿ ಜನಿಸಿದರು. ಅವರ ಪೂರ್ವಿಕರು ಮೂಲತಃ ಪುತ್ತೂರಿಗೆ ಸಮೀಪದ ‘ಪಂಜ’ದವರಾಗಿದ್ದರು. ಅವರು ವಿವಾಹವಾಗಿದ್ದು ನಾಡಿನಲ್ಲಿ ಪ್ರಸಿದ್ಧರಾದ ಬೆನಗಲ್ ರಾಮರಾಯರ ತಂಗಿ ಗಿರಿಜಾಬಾಯಿ ಅವರನ್ನು.

ಬಿ.ಎ ವಿದ್ಯಾಭ್ಯಾಸ ಮುಗಿಸಿ ಎಲ್.ಟಿ ತರಬೇತಿ ಪಡೆದ ಪಂಜೆಯವರು ಪ್ರಾರಂಭದಲ್ಲಿ ಶಿಕ್ಷಕರಾಗಿ, ಮಂಗಳೂರಿನ ಶಾಲಾ ಸಬ್ ಇನ್ಸ್ಪೆಕ್ಟರ್ ಆಗಿ, ಇನ್ಸ್ಪೆಕ್ಟರ್ ಆಗಿ ಕಾಸರಗೋಡು, ಮಂಗಳೂರು, ಮಡಿಕೇರಿ ಮುಂತಾದ ಕಡೆಗಳಲ್ಲಿ ಕಾರ್ಯನಿರ್ವಹಿಸಿದರು. ಕೇವಲ ತಮ್ಮ ಕಾರ್ಯಕ್ಷೇತ್ರಕ್ಕೆ ಮೀಸಲಾಗಿರದೆ ಹೊರಗಿನ ಜೀವನದಲ್ಲೂ ಪಂಜೆಯವರು ಪ್ರವೇಶಿಸಿ, ಸಾಮಾಜಿಕ ಕಾರ್ಯಗಳಲ್ಲೂ, ಸಾಹಿತ್ಯಾಧ್ಯಯನ, ಸಾಹಿತ್ಯ ರಚನೆಗಳಲ್ಲೂ ಆಸಕ್ತಿ ತಳೆದು ಜನರ ಸ್ನೇಹವನ್ನು ಸಂಪಾದಿಸಿದರು. ತಮ್ಮ ಪ್ರವಾಸಾನುಭವಗಳಿಂದ ಪ್ರೇರಿತರಾಗಿ ತಿರುಳು ಹುರುಳುಗಳಿರುವ ಸಾಹಿತ್ಯ ಸೃಷ್ಟಿ ಮಾಡಿದರು. ಹರಟೆ, ಹಾಡು, ಕಿರುಗಥೆ ಹೀಗೆ ಅವರ ಸಾಹಿತ್ಯ ಸೃಷ್ಟಿ ನಾನಾ ಮುಖವಾದದ್ದು.

ಪಂಜೆಯವರು 1918ರಿಂದ 21ರವರೆಗಿನ ಅವಧಿಯಲ್ಲಿ ಶಿಕ್ಷಣರಂಗದಲ್ಲಿ ಫಲಕಾರಿಯಾದ ಅನೇಕ ನೂತನ ಪ್ರಯೋಗಗಳನ್ನು ಮಾಡಿದರು. ಅವುಗಳಲ್ಲಿ ಪ್ರಮುಖವಾದದ್ದೆಂದರೆ ಹರಿಜನ ಬಾಲಕರಿಗೂ ಶಾಲಾ ಪ್ರವೆಶವನ್ನು ದೊರಕಿಸಿದ್ದು; ಅವರೊಂದಿಗೆ ಸಹಪಂಕ್ತಿ ಭೋಜನ ಮಾಡಿದ್ದು. ಮಡಿಕೇರಿಯಲ್ಲಿ ಅವರು ಶಾಲಾ ಇನ್ಸ್ಪೆಕ್ಟರ್ ಆಗಿದ್ದ ಸಮಯದಲ್ಲಿ ಪ್ರಸಿದ್ಧವಾದ ‘ಹುತ್ತರಿ ಹಾಡ’ನ್ನು ಬರೆದರು.

1943ರಲ್ಲಿ ಸ್ವಯಂನಿವೃತ್ತಿ ಪಡೆದು ಮಂಗಳೂರಿಗೆ ಹಿಂದಿರುಗಿದ ಪಂಜೆಯವರು ತಮ್ಮ ವಿಶಿಷ್ಟ ಸಾಹಿತ್ಯ ಸೃಷ್ಟಿ, ರಸಿಕತೆ, ಸಂಘಟನಾ ಕುಶಲತೆಗಳಿಂದ ನಾಡಿನ ಅನೇಕ ವಿದ್ವಜ್ಜನರ, ಸಾಹಿತ್ಯ ಸಹೃದಯರ ಪ್ರೀತ್ಯಾದಾರಗಳಿಗೆ ಪಾತ್ರವಾಗಿದ್ದರು. ತತ್ಪಲವಾಗಿ 1934ರಲ್ಲಿ ರಾಯಚೂರಿನಲ್ಲಿ ಸಮಾವೇಶಗೊಂಡ ಇಪ್ಪತ್ತನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಪದವಿ ಅವರಿಗೆ ಲಭಿಸಿತು.

ಪಂಜೆಯವರು ಹೊಸಗನ್ನಡ ಸಾಹಿತ್ಯದ ಪ್ರವರ್ತಕರಲ್ಲಿ ಪ್ರಮುಖರು. ಕವಿ ಶಿಷ್ಯ, ರಾ.ಮ.ಪಂ, ಹರಟೆ ಮಲ್ಲ ಮುಂತಾದ ಗುಪ್ತನಾಮಗಳಿಂದ ಪಂಜೆಯವರು ರುಚಿಯಾದ ಶುಚಿಯಾದ ಸಾಹಿತ್ಯವನ್ನು ರಚಿಸಿದರು. ಅನುವಾದ ರೂಪಾಂತರಗಳೇ ಇರಲಿ, ದೇಶೀ ಜನಪದ ಸಾಹಿತ್ಯ ಪ್ರೇರಿತವೇ ಆಗಿರಲಿ ಎಲ್ಲವುಗಳಿಗೂ ‘ಪಂಜೆ’ತನದ ಮುದ್ರೆಯನ್ನೊತ್ತಿ ಸ್ವತಂತ್ರವೆಂದೇ ತೋರುವಷ್ಟು ಸಹಜವಾಗಿ, ಸುಂದರವಾಗಿ ಕನ್ನಡದಲ್ಲಿ ನಿರೂಪಿಸಿರುವುದು ಅವರ ಶ್ರೇಷ್ಟತೆ ಮತ್ತು ವಿಶಿಷ್ಟತೆ. ಅವರು ರಚಿಸಿದ “ತೆಂಕಣ ಗಾಳಿಯಾಟ’, ‘ಅಣ್ಣನ ವಿಳಾಸ’, ‘ನಕ್ಷತ್ರ’ದಂತಹ ಕವಿತೆಗಳು, ‘ಕೋಟಿಚೆನ್ನಯ್ಯ’ ಮುಂತಾದವನ್ನು ರೂಪಾಂತರ-ಭಾವಾಂತರ ಅಥವಾ ಭಾಷಾಂತರಗಳೆಂದು ಯಾರು ತಾನೇ ಹೇಳಬಲ್ಲರು? ಅವರು ರಚಿಸಿದ ವಿಪುಲ ಶಿಶುಸಾಹಿತ್ಯದಲ್ಲಿ ಎಷ್ಟೋ ಕತೆ-ಕವಿತೆಗಳು ಅನ್ಯ ಸಾಹಿತ್ಯದಿಂದ, ಮುಖ್ಯವಾಗಿ ಇಂಗ್ಲಿಷಿನಿಂದ ತಂದುಕೊಂಡಿದ್ದು.

‘ಬಾಲ್ಯ ಸಾಹಿತ್ಯ’ ಪಂಜೆಯವರ ಪ್ರಥಮ ಪ್ರೇಮ. ಬಾಲ ಸಾಹಿತ್ಯದ ಪ್ರಕಟಣೆ, ಪ್ರಚಾರಗಳಿಗಾಗಿಯೇ ಪಂಜೆಯವರು ಶ್ರೀ ಉಲ್ಲಾಳ ಮಂಗೇಶರಾಯರಂತ ಸುಹೃತ್ ಬಲದಿಂದ 1921ರಲ್ಲಿ, ಮಂಗಳೂರಿನ ಕೊಂಡಿಯಾಲ ಬೈಲಿನಲ್ಲಿ ‘ಬಾಲ ಮಂಡಲ’ವನ್ನು ಸ್ಥಾಪಿಸಿದರು. ತಮ್ಮ ಶಿಕ್ಷಣ ಜೀವನದಲ್ಲಿ ಮಕ್ಕಳೊಂದಿಗೆ ಬೆರೆತು, ನಡೆ ನುಡಿಗಳನ್ನು ಚೆನ್ನಾಗಿ ಅರಿತುಕೊಂಡಿದ್ದ ಪಂಜೆಯವರು, ಮಕ್ಕಳ ಶಬ್ದ ಸಂಗ್ರಹ ಸಣ್ಣದು, ಕಲ್ಪನಾಶಕ್ತಿ ದೊಡ್ಡದು ಎಂಬುದನ್ನು ಬಲ್ಲವಾರಾಗಿದ್ದರಿಂದ ಅದಕ್ಕೆ ತಕ್ಕಂತೆ ಸಾಹಿತ್ಯದ ಅಡುಗೆ ಮಾಡಿ ಬಡಿಸಿದರು. ಮಕ್ಕಳು ನಾ ಮುಂದು, ತಾ ಮುಂದು ಎಂದು ತಿಂದರು, ತೇಗಿದರು, ಕುಣಿದು ಕುಪ್ಪಳಿಸಿದರು. ಆ ಅಡುಗೆಯ ಕಂಪು, ಆ ತೇಗಿದ ದನಿ ಈಗಲೂ ಕನ್ನಡದ ಉದ್ದಗಲದಲ್ಲಿ ಮೂಗಿಗೆ ಬಡಿಯುತ್ತಿದೆ, ಕಿವಿಗೆ ಕೇಳುತ್ತಿದೆ!

ಪಂಜೆಯವರು ರಚಿಸಿದ ಬಾಲಸಾಹಿತ್ಯದಲ್ಲಿ ಕಥೆಗಳದು ಒಂದು ಗುಂಪಾದರೆ ಗೀತಗಳದು ಇನ್ನೊಂದು; ಕಥನಕವನಗಳದು ಮತ್ತೊಂದು. ‘ಗುಡುಗುಡು ಗುಮ್ಮಟದೇವರು’, ‘ಹೇನು ಸತ್ತು ಕಾಗೆ ಬಡವಾಯಿತು’, ‘ಆರ್ಗಣೆ ಮುದ್ದೆ’, ‘ಸಿಗಡೆ ಯಾಕೆ ಒಣಗಲಿಲ್ಲ’, ‘ಮೆಣಸಿನ ಕಾಳಪ್ಪ’, ‘ಮೂರು ಕರಡಿಗಳು’, ‘ಇಲಿಗಳ ಥಕ ಥೈ’ ಇವು ಕೆಲವು ಕಥೆಗಳು. ಇವುಗಳಲ್ಲದೆ ‘ಪ್ರುಥುವಾ ಶೈಲಿನಿ’, ‘ದುರ್ಗಾವತಿಯೇ’, ಮುಂತಾದ ಪ್ರೌಢ ನೀಳ್ಗತೆಗಳೂ, ಕಿರುಕಾದಂಬರಿಯೆನ್ನಬಹುದಾದ ‘ಕೋಟಿ ಚೆನ್ನಯ್ಯ’ವೂ ಇದೆ. ಮಕ್ಕಳ ಕಿರುಕಥೆಗಳು ರಸಪೂರ್ಣವಾಗಿದ್ದು ಸರಳ-ಸುಲಭ ಭಾಷೆಗಳಲ್ಲಿ ನಿರೂಪಿತವಾಗಿವೆ. ಮಕ್ಕಳ ಮನಸ್ಸನ್ನು ಆವರಿಸಿ ನಿಲ್ಲುವಂತದ್ದಾಗಿವೆ. ಒಂದೆರಡು ಉದಾಹರಣೆಗಳನ್ನು ಇಲ್ಲಿ ಗಮನಿಸಬಹುದು:

“ಹೇನಿನ ಮನೆಯಲ್ಲಿ ಹಬ್ಬ ಬಂತು. ಹೇನು ಕಾಗೆಯನ್ನು ಊಟಕ್ಕೆ ಕರೆಯಿತು. ಹೇನು ಬೆಳಗ್ಗೆ ಎದ್ದು, ಸೆಗಣಿ ಬಳಿದು, ಮುಸುರೆ ತೊಳೆದು, ಸ್ನಾನಮಾಡಿತು; ಮತ್ತು ಬೆಂಕಿ ಹೊತ್ತಿಸಿ ನೀರು ಮೊಗೆದು ಅಡಿಗೆ ಮಾಡಿತು. ಪಾಯಸಕ್ಕೆ ಪಾತ್ರೆಯನ್ನು ಒಲೆಯ ಮೇಲೆ ಇಟ್ಟು, ಪಾತ್ರೆಯಲ್ಲಿ ಬೆಲ್ಲ ಹಾಕಿತು. ಪಾಯಸವನ್ನು ಸಟ್ಟುಗದಿಂದ ಕೆದಕುವಾಗ ಆ ಹೇನು ಪಾಯಸದಲ್ಲಿ ಜಾರಿಬಿದ್ದು ಸತ್ತು ಹೋಯಿತು...” (ಹೇನು ಸತ್ತು ಕಾಗೆ ಬಡವಾಯಿತು)

“... ಅರಸು ಮಗನು ಗುಮ್ಮಟ ಬೆಟ್ಟಕ್ಕೆ ಹೋಗುವಾಗ ಕೊಂಬು ಇತ್ತು. ಕಹಳೆ ಇತ್ತು, ವಾದ್ಯ ಇತ್ತು, ವಾಲಗ ಛತ್ರ ಇತ್ತು, ಚಾಮರ ಇತ್ತು; ಬಾವುಟೆ ಇತ್ತು; ದೀವೇಟೆ ಇತ್ತು; ಕನ್ನಡಿ ಇತ್ತು, ಕಲಶ ಇತ್ತು; ದೊಡ್ಡ ದಂಡಿಗೆ ಇತ್ತು, ಅಡ್ಡ ಪಲ್ಲಕ್ಕಿ ಇತ್ತು; ಅಡ್ಡಪಲ್ಲಕ್ಕಿಯಲ್ಲಿ ಅರಸು ಮಗನು ಕೂತಿದ್ದನು.....”

‘ಕವಿತೆಯನ್ನು ಓದುವಾಗ ಒಂದು ಚಿತ್ರ ಕಣ್ಣಿಗೆ ಕಟ್ಟಿದಂತಿರಬೇಕು’ ಎಂಬುದು ಪಂಜೆಯವರ ಸೂಕ್ತಿ. ಅವರ ಶಿಶು ಗೀತೆಗಳೆಲ್ಲ ಈ ಉಕ್ತಿಯನ್ನು ಸಮರ್ಥಿಸುವಂತೆಯೇ ಇವೆ. ‘ತೂಗುವೆ ತೊಟ್ಟಿಲು’, ‘ಹಾವಿನ ಹಾಡು’, ಜೋಗುಳ’, ‘ಸಂಜೆಯ ಹಾಡು’ ಮುಂತಾದ ರಚನೆಗಳಲ್ಲಿ ಒಂದೊಂದೂ ಕಿವಿ ಮನಸ್ಸುಗಳೆರಡನ್ನೂ ಒಟ್ಟಿಗೆ ಹಿಡಿದು ನಿಲ್ಲಿಸಬಲ್ಲ ರಸಚಿತ್ರಗಳು. ‘ಡೊಂಬರ ಚೆನ್ನೆ’, ‘ಕೆಡೆಕಂಜಿ’, ‘ನಾಗಣ್ಣನ ಕನ್ನಡಕಗಳು’, ಸ್ವಲ್ಪ ದೀರ್ಘವಾಗಿರುವ ಕಥನಕವನಗಳು. ಇವುಗಳ ಚೆಲುವಾದರೂ ಹಾಗೆಯೇ - ಕಿರಿಯರಿಗೂ ಹಿರಿಯರಿಗೂ ಒಟ್ಟಾಗಿ ಒಪ್ಪಿಗೆಯಾಗುತ್ತವೆ.

ಶಿಶುಗೀತ, ಕಥನಕವನಗಳ ಜೊತೆಗೆ ಪಂಜೆಯವರು ಬರೆದ ಕೆಲವು ಪ್ರೌಢ ಕವಿತೆಗಳೂ ಇವೆ. ‘ಚಂದ್ರೋದಯ’, ‘ಭೀಷ್ಮ ನಿರ್ಯಾಣ’, ‘ತೂಕಡಿಕೆಯನು ಕಳೆಯದೇಕೆ ಕುಳಿತಿಹೆ’, ‘ಸತ್ಯಸೀಮೆಗೆ ತಾಯೆ ನಡೆಸೆನ್ನ’ ಇವೆಲ್ಲ ಹಿರಿಯರಿಗೆ ಹೆಚ್ಚು ಪ್ರಿಯವಾಗಬಹುದಾದ ರಚನೆಗಳು. ಮುಂಗಾರು ಮಳೆಯ ಅಬ್ಬರವನ್ನು ಸಶಕ್ತವಾಗಿ ಚಿತ್ರಿಸುವ ‘ತೆಂಕಣಗಾಳಿಯಾಟ’, ಕೊಡಗಿನ ಪ್ರಾಕೃತಿಕ ಸೌಂದರ್ಯವನ್ನೂ ವೀರಶ್ರೀಯನ್ನೂ ವರ್ಣಿಸುವ ‘ಹುತ್ತರಿಹಾಡು’ ಎಲ್ಲ ವರ್ಗದ ಜನವೂ ಮೆಚ್ಚಿ ತಲೆದೂಗುವ ಕವಿತೆಗಳು. ಇವುಗಳಲ್ಲಿ ವರ್ಣನಾತ್ಮಕವಾದವು, ದೇಶಭಕ್ತಿ ಪ್ರಚೋದಕವಾದವು, ನೀತಿಬೋಧಕವಾದವು ಎಲ್ಲವೂ ಇವೆ. ಹರಿಜನರ ದಯನೀಯ ಸ್ಥಿತಿಗಾಗಿ ಮರುಗಿ, ಕರಗಿ ಬರೆದ ‘ಹೊಲೆಯನ ಹಾಡು’ ಎಲ್ಲ ಕಾಲದಲ್ಲೂ ನೆನಪಿಡಬೇಕಾದ ಒಂದು ಕವಿತೆ – ಪಂಜೆಯವರ ಪ್ರಾಗತಿಕ ಮನೋಭಾವಕ್ಕೆ ಒಂದು ಪ್ರಬಲ ನಿದರ್ಶನ:

“ಉಳ್ಳಯ್ಯಾ; ದಯೆಗೊಳ್ಳಯ್ಯಾ!
ಕಣ್ಣು, ಮೂಗು, ಕಿವಿ, ಕೈ, ಕಾಲು, ಗಂಟಲು –
ಅಣ್ಣ, ನಿಮ್ಮಂತೆಯೆ ನಮಗೆಲ್ಲ ಉಂಟು.
ಬಣ್ಣ ಕಪ್ಪೆಂದು ನೀ ಬಿಡುವುದೆ ನಂಟು?
ಎಣ್ಣೆಯೋಲ್ ಹಿಡಿವುದೇ ನಮ್ಮ ಮೈ ಅಂಟು?


ಎಂದು ಉಚ್ಚವರ್ಣೀಯರೊಂದಿಗೆ ತನ್ನ ಗೋಳನ್ನು ಹೇಳಿಕೊಳ್ಳುತ್ತಾನೆ ಒಬ್ಬ ದಲಿತ ಹರಿಜನಬಂಧು. ಬಹುಕಾಲದಿಂದ ನಡೆದುಬಂದಿರುವ ಒಂದು ಅಮಾನುಷ ಅನಿಷ್ಟ ಪ್ರವೃತ್ತಿಯನ್ನು ಪಂಜೆಯವರು ಶೋಷಿತ ಭ್ರಾತೃವಿನ ಬಾಯಿಯಿಂದಲೇ ಹೇಳಿಸಿ ಓದುಗರ ಎದೆಯನ್ನು ಹಿಂಡಿದ್ದಾರೆ.


ಪಂಜೆಯವರ ಬರಹಗಳು ಅಂದಿನ ‘ಸತ್ಯದೀಪಿಕೆ’, ‘ಸುವಾಸಿನಿ’, ‘ಸ್ವದೆಶಾಭಿಮಾನಿ’, ‘ಸಹಕಾರಿ’, ‘ಕಂಠೀರವ’ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾದವು. ‘ಪದಾರ್ಥವೇನು’ ಎಂಬ ಸ್ಥಿರ ಶೀರ್ಷಿಕೆಯಲ್ಲಿ ಅವರು ಭಾಷಾ ವಿಷಯವಾದ ಒಂದು ಲೇಖನಮಾಲೆಯನ್ನೇ ಸೃಷ್ಟಿಸಿದ್ದರು. ‘ಹಳೆಯ ಸಬ್ ಅಸಿಸ್ಟಂಟನ ಸುಳ್ಳು ಡೈರಿಯಿಂದ’ ಎಂಬ ಲೇಖನದಲ್ಲಿ ಪಂಜೆಯವರು ತಮ್ಮ ಅಧಿಕಾರೀ ಜೀವನದ ಹತ್ತಾರು ಹೃದಯಂಗಮ ಚಿತ್ರಗಳನ್ನು ನೀಡಿದ್ದಾರೆ. ಅದು ಅವರ ಹಾಸ್ಯರಸಿಕತೆಗೂ ಉದಾಹರಣೆಯಾಗಿವೆ. ‘ಸ್ಥಳನಾಮ’, ‘ಮೂಡುಬಿದರೆಯ ಹೊಸಬಸದಿಯ ಶಾಸನಗಳು’, ‘ಬಿಳಗಿಯ ಕೆಲವು ಶಾಸನಗಳು’, ‘ಕುಮಾರವ್ಯಾಸನ ಹೆಗ್ಗಳಿಕೆ’, ‘ಹೊಸದಾರಿ’, ‘ನಂದಳಿಕೆ ಲಕ್ಷ್ಮೀನಾರಾಯಣಪ್ಪನವರು’, ‘ಸರ್ವಜ್ಞನ ಓನಾಮ ಪದ್ಧತಿ’ಯೇ ಮೊದಲಾದ ಲೇಖನಗಳಲ್ಲಿ ಪಂಜೆಯವರ ಬಹುಮುಖ್ಯ ವೈದುಷ್ಯ, ಪ್ರಸಕ್ತಿಗಳು ಪ್ರಕಟವಾಗುತ್ತವೆ.


ಅವರು ರಾಯಚೂರು ಸಮ್ಮೇಳನದ ಅಧ್ಯಕ್ಷಭಾಷಣದಲ್ಲಿ “....ನನಗೀಗ ಇರುವುದು ಒಂದೇ ಆಶೆ, ನನ್ನ ಕಡೆಯ ಗಳಿಗೆಯಲ್ಲಿ ನನ್ನ ನಾಲಗೆ ‘ಕೃಷ್ಣ’, ‘ಕೃಷ್ಣ’ ಎಂದು ನುಡಿಯುವಂತೆಯೇ ‘ಕನ್ನಡ’, ‘ಕನ್ನಡ’ ಎಂದೂ ನುಡಿಯುತ್ತಿರಲಿ!’ ಎಂದು ಉದ್ಘರಿಸಿದಾಗ ಸಭೆ ಸ್ತಬ್ದವಾಯಿತೆಂದೂ ಚೇತರಿಸಿಕೊಳ್ಳಲು ಎರಡು ಗಳಿಗೆ ಬೇಕಾಯಿತೆಂದೂ ಆ ಸಂದರ್ಭವನ್ನು ಡಿ.ವಿ.ಜಿಯವರು ನೆನಪಿಸಿಕೊಂಡಿದ್ದಾರೆ. ಪಂಜೆಯವರನ್ನು ಸಮೀಪದಿಂದ, ಆದರದಿಂದ ಕಂಡಿದ್ದ ಶ್ರೀ ಸೇಡಿಯಾಪು ಕೃಷ್ಣಭಟ್ಟರು ಹೀಗೆ ಹೇಳಿದ್ದಾರೆ: “ಪಂಜೆಯವರು ಕಥೆ ಕವನಗಳನ್ನು ಬರೆಯುವ ಕಸುಬು ಮಾಡಿದವರಲ್ಲ. ಬರೆಯಬೇಕೆಂಬ ಅಂತಃಪ್ರೇರಣೆ ಒತ್ತೊತ್ತಿ ಬಂದಾಗ ಮಾತ್ರ ಬರೆದವರು; ಆಗ ಕೂಡಾ ಸಂಯಮದಿಂದ ಬರೆದವರು.... ಪಂಜೆಯವರು ಇಂಗ್ಲೀಷಿನಲ್ಲಿ ವಿದ್ವಾಂಸರೇ ಆದರೂ, ಆ ಸಾಹಿತ್ಯವನ್ನು ಸವಿದು ಮೆಚ್ಚಿ ನಲಿದವರೇ ಆದರೂ, ಅವರು ಬರೆದುದೆಲ್ಲಾ ಇಂಗ್ಲಿಷ್ ಕಲಿಯದವರಿಗಾಗಿ; ಕೇವಲ ಕನ್ನಡವನ್ನು ಬಲ್ಲ, ಸಾಮಾನ್ಯರ ಸಂತೋಷಕ್ಕಾಗಿ, ಹೃದಯ ಸಂಸ್ಕಾರಕ್ಕಾಗಿ...”


ತಮ್ಮ ಮಗನೊಡನೆ ಇರಲು ಒಮ್ಮೆ ಜಮಷೆಡಪುರಕ್ಕೆ ಹೋಗಿದ್ದ ಅವರನ್ನು ಅಲ್ಲಿನ ಉಕ್ಕು ಕಾರ್ಖಾನೆ, ಕುಲುಮೆ ಇವುಗಳನ್ನೆಲ್ಲಾ ನೋಡಿದಿರಾ ಎಂದು ಶಿವರಾಮ ಕಾರಂತರು ಪ್ರಶ್ನಿಸಿದಾಗ ಅದನ್ನೆಲ್ಲಾ ನನಗೆ ನೋಡಲು ಆಗುವುದೇ ಇಲ್ಲ ಎಂದರಂತೆ. ಅದಕ್ಕೆ ಕಾರಂತರು ಹೇಳುತ್ತಾರೆ. “ಆ ಉಕ್ಕಿನ ಕಾರ್ಖಾನೆಯ ಕಬ್ಬಿಣದ ಗಾಣಗಳನ್ನೂ ಕುಲುಮೆಗಳನ್ನೂ ಕಂಡು ಸಹಿಸಲು ಅವರಿಂದ ಆಗದೇ ಆಗದು!”. ಅಷ್ಟೊಂದು ಮೃದು ಹೃದಯಿಗಳು ಅವರು. ಬಿ ಎಂ ಶ್ರೀಯವರ ‘ದುಃಖ ಸೇತು’ವನ್ನು ಆಗಾಗ ಓದಿ ಅಲ್ಲಿಯ ಕರುಣಾರಸಾನುಭವವನ್ನು ಮಾಡುವುದೂ ಸಭೆಗಳಲ್ಲಿ ಹಾಡಿ ಕೇಳುಗರ ಎದೆಯನ್ನು ಕರಗಿಸುತ್ತಾ ಇದ್ದುದು ಆಶ್ಚರ್ಯಕರವಲ್ಲ.

ತಮ್ಮ ಮಕ್ಕಳ ಜೊತೆ ಇರಲು ವಿವಿದೆಡೆಗಳಲ್ಲಿ ಸಂಚರಿಸುತ್ತಿದ್ದ ಪಂಜೆಯವರು 1937ರಲ್ಲಿ ತಮ್ಮ ಮಗನ ಊರಾದ ಹೈದರಾಬಾದಿನಲ್ಲಿ ನಿಧನರಾದರು. ಆ ಸಂದರ್ಭದಲ್ಲಿ ರಾಷ್ಟ್ರಕವಿ ಗೋವಿಂದ ಪೈ ಅವರು ಉದ್ಘರಿಸಿದ್ದು ಹೀಗೆ: “ತುಳುನಾಡಿನ ಕನ್ನಡ ಸಾಹಿತ್ಯದ ವಿಗಡ ದೀಪಸ್ತಂಭವಾರಿತು; ಬೆಳಕು ಬೆಳಕಿಗೆ ಸಾರಿತು”

ಪಂಜೆಯವರ ಬಗ್ಗೆ ವಿ.ಸೀತಾರಾಮಯ್ಯನವರ ಒಂದು ಮಾತು ನೆನಪಿಸಿಕೊಳ್ಳುವುದು ಈ ಸಂದರ್ಭದಲ್ಲಿ ಸೂಕ್ತವಾಗುತ್ತದೆ. “ಅವರನ್ನು ನೆನೆಸಿಕೊಂಡಾಗಲೆಲ್ಲಾ ಒಂದು ತುಂಬುಬಾಳಿನ ಚಿತ್ರ ಕಣ್ಣಮುಂದೆ ಬರುತ್ತದೆ. ಒಂದು ಕಾಲ, ಒಂದು ಜನತೆ ಇಂಥವರ ಹುಟ್ಟು ಬದುಕುಗಳಿಂದ ಒಂದು ವಿಶೇಷ ಬಗೆಯ ಕೃತಾರ್ಥತೆಯನ್ನು ಪಡೆಯುತ್ತದೆ”. ಇಂತಹ ಶ್ರೇಷ್ಠರ ನಾಡಿನಲ್ಲಿ ಹುಟ್ಟಿದ ನಮ್ಮ ಬದುಕು ಕೂಡಾ ದೊಡ್ಡದೆ.

ಅಭಿನಂದನೆಗಳು: ಕನ್ನಡ ಸಂಪದ

Thursday, April 14, 2011

ಶ್ರೀಕೃಷ್ಣ ಆಲನಹಳ್ಳಿ

 
1947ರ ವರ್ಷದಲ್ಲಿ ...ಏಪ್ರಿಲ್ 3ನೇ ದಿನಾಂಕದಂದು ಮೈಸೂರು ಜಿಲ್ಲೆಯ ಆಲನಹಳ್ಳಿಯಲ್ಲಿ ಜನಿಸಿದರು. ಮೈಸೂರು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕರಾಗಿದ್ದವರು. ಅವರು ಬದುಕಿದ್ದು ನಲವತ್ತೆರಡು ವರ್ಷಕ್ಕೂ ಕಡಿಮೆ ಅವಧಿ. ಅವರು ನಿಧನರಾದದ್ದು ಜನವರಿ 4, 1989ರಲ್ಲಿ. ಈ ಅತಿ ಚಿಕ್ಕ ವಯಸ್ಸಿನಲ್ಲೇ ಅವರು ಕನ್ನಡ ಸಾಹಿತ್ಯದಲ್ಲಿ ಮೂಡಿಸಿ ಹೋದ ಛಾಪು ಅತ್ಯಂತ ಸ್ಮರಣೀಯವಾದದ್ದು.

ಆಲನಹಳ್ಳಿಯವರು ವಿದ್ಯಾರ್ಥಿ ಜೀವನದಲ್ಲೇ ‘ಸಮೀಕ್ಷಕ’ ಎಂಬ ಸಾಹಿತ್ಯ ಪತ್ರಿಕೆಯನ್ನು ಆರಂಭಿಸಿದ್ದರು. ಸಾಹಿತ್ಯ ವಲಯದಲ್ಲಿ ಅದು ಎಲ್ಲೆಡೆ ಮೆಚ್ಚುಗೆ ಪಡೆದಿತ್ತು. ಅಂದಿನ ಬಹುತೇಕ ಪ್ರಸಿದ್ಧ ಬರಹಗಾರರು ಈ ಪತ್ರಿಕೆಯಲ್ಲಿ ಬರೆಯುತ್ತಿದ್ದರು. ಅಂದಿನ ದಿನ ಆ ಪತ್ರಿಕೆಯಲ್ಲಿ ಬರೆಯಿರಿ ಎಂದು ಅವರು ತಮ್ಮ ಗೆಳೆಯರನ್ನು ಎಷ್ಟು ಒತ್ತಾಯಿಸುತ್ತೆಂದರೆ, ಪಿ. ಲಂಕೇಶ್ ಅವರು ಅವರ ಒತ್ತಾಯದ ಕಾಟವನ್ನೇ ಒಂದು ಕವನದ ಸಾಲಾಗಿ “ನನ್ನ ಸುತ್ತಾ” ಎಂಬ ಅವರ ಪ್ರಸಿದ್ಧ ಕವನದಲ್ಲಿ ಬರೆದಿದ್ದರು.

ಶ್ರೀಕೃಷ್ಣ ಆಲನಹಳ್ಳಿ ಅವರ ಕವನ ಸಂಗ್ರಹ “ಮಣ್ಣಿನ ಹಾಡು” ಕೃತಿಗೆ ಮುನ್ನುಡಿಯಲ್ಲಿ ಅಡಿಗರು ಅದನ್ನು ಕನ್ನಡ ಕಾವ್ಯದಲ್ಲಿ ನಡೆದ ‘ಘಾತಪಲ್ಲಟ’ ಎಂದು ಬಣ್ಣಿಸಿದ್ದರು. ಅದು ಶ್ರೀಕೃಷ್ಣರಿಗೆ ದೊಡ್ಡ ಹೆಸರು ತಂದಿತು. ಎಷ್ಟು ಹೆಸರು ಎಂದರೆ ಅಂದು ಮಹಾರಾಜಾ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದ ಎಸ್. ನಾರಾಯಣ ಶೆಟ್ಟರು, “ಲೈಬ್ರೆರಿಯಿಂದ ಕೃಷ್ಣನ ಪುಸ್ತಕ ಎಲ್ಲರೂ ತೆಗೆದುಕೊಂಡು ಹೋಗಿ ಓದುತ್ತಾರೆ, ನನ್ನದು ಯಾರೂ ತೆಗೆದುಕೊಂಡು ಹೋಗುವುದಿಲ್ಲ, ನನ್ನದನ್ನೂ ತೆಗೆದುಕೊಂಡು ಹೋಗಲಿ ಎಂದು ಲೈಬ್ರೆರಿಯಲ್ಲಿ ನನ್ನ ಪುಸ್ತಕವನ್ನು ಅವನ ಪುಸ್ತಕದ ಹತ್ತಿರವೇ ಇಟ್ಟೆ, ಆದರೂ ಯಾರೂ ತೆಗೆದುಕೊಂಡು ಹೋಗಲಿಲ್ಲ” ಎಂದು ತಮಾಷೆಯಾಗಿ ಹೇಳುತ್ತಿದ್ದರಂತೆ. ಆ ಮಾತು ನಿಜವೂ ಆಗಿತ್ತು. ಕೃಷ್ಣ ಒಳ್ಳೆಯ ಲೇಖಕರು ಮಾತ್ರ ಅಲ್ಲ, ಜನಪ್ರಿಯರೂ ಆಗಿದ್ದರು.

ಮುಂದೆ ಆಲನಹಳ್ಳಿ ಅವರು ಕಾದಂಬರಿಗಳನ್ನು ಬರೆಯಲು ಪ್ರಾರಂಭಿಸಿದರು. ಅವರ ‘ಕಾಡು’, ‘ಪರಸಂಗದ ಗೆಂಡೆತಿಮ್ಮ’, ‘ಗೀಜಗನ ಗೂಡು’, ‘ಫೀನಿಕ್ಸ್’ ಅಂದಿನ ದಿನದಲ್ಲೇ ಸಿನೆಮಾಗಳಾದವು. ಅವರಿಗೆ ಅಪಾರ ಪ್ರಖ್ಯಾತಿ ಬಂತು. ಆದರೆ ಅವರಿಗೆ ಐಶ್ವರ್ಯ ಬಂತೇ? ಬಹುಶಃ ಇಲ್ಲ ಎನ್ನುತ್ತಾರೆ ಅವರ ಅವರ ಅಂದಿನ ಗೆಳೆಯರು. ತೋಟ ಮಾಡಿದರು. ಅದು ಫಲ ಬರುವಷ್ಟು ಬೆಳೆಯುವ ಹೊತ್ತಿಗೆ ಹೋಗಿಬಿಟ್ಟರು. ‘ಸಮೀಕ್ಷಕ’ ಪ್ರಕಟಿಸುವಾಗಲೂ ಅವರು ಶ್ರೀಮಂತರಾಗಿರಲಿಲ್ಲ. ತಂದೆಯನ್ನು ಚಿಕ್ಕಂದಿನಲ್ಲಿ ಕಳೆದುಕೊಂಡಿದ್ದರು. ತಾಯಿ ಊರಿನಲ್ಲಿ ಇದ್ದರು. ವಿದ್ಯಾರ್ಥಿ ದೆಸೆಯಲ್ಲಿ ಜೆ. ಎಸ್. ಎಸ್ ಹಾಸ್ಟೆಲಿನ ಬಿಟ್ಟಿ ಊಟ, ಗೀತಾ ರಸ್ತೆಯ ಸಂಪಿಗೆ ಮರದ ಕೆಳಗಿನ ಮನೆಗೆ ಹತ್ತು ರೂಪಾಯಿ ಬಾಡಿಗೆ ಕೊಡುವಾಗಲೂ ಪರದಾಡಿ ನೂರೆಂಟು ಸಣ್ಣ ಪುಟ್ಟ ಸಾಲಗಳಲ್ಲಿ ಮುಳುಗಿರುತ್ತಿದ್ದರಂತೆ.

ಶ್ರೀಕೃಷ್ಣ ಆಲನಹಳ್ಳಿ ಅವರ ನಿಧನಾನಂತರ ಅವರ “ಭುಜಂಗಯ್ಯನ ದಶಾವತಾರಗಳು” ಕೂಡಾ ಚಲನಚಿತ್ರವಾಯಿತು. ಶ್ರೀಕೃಷ್ಣ ಆಲನಹಳ್ಳಿ ಅವರ ಬದುಕು ಸ್ವಲ್ಪ ಎಗ್ಗಿಲ್ಲದ ಜೀವನಕ್ಕೆ ಹೊಂದಿಕೊಂಡಿತ್ತು ಎಂಬುದು ಅವರ ಅಂದಿನ ಗೆಳೆಯರುಗಳ ಮಾತಿನಲ್ಲಿ ಕಾಣಬರುತ್ತದೆ. ಆದರೆ ಅವರು ತಮ್ಮ ಬರಹಗಳಲ್ಲಿ ನಿರಂತರವಾಗಿ ಬೆಳೆಯುತ್ತಿದ್ದವರು. ಅವರ ಕೊನೆಯ ಕೃತಿಗಳಾದ “ತಿಕ ಸುಟ್ಟ ದೇವರು”, “ಅರಮನೆ” ಮೊದಲಾದವುಗಳಲ್ಲಿನ ಅವರ ಭಾಷೆಯ ಬಳಕೆ, ಅನುಭವ ಹೆಚ್ಚು ಹೆಚ್ಚು ಮಾಗಿದ್ದು ಕಾಣುತ್ತದೆ. ಅವರು ಶ್ರೇಷ್ಠತೆಯ ಮಟ್ಟ ತಲುಪಿದ್ದರು ಎಂಬುದು ಸಾಹಿತ್ಯ ವಿದ್ವಾಂಸರ ಅಭಿಪ್ರಾಯ.

‘ಮಣ್ಣಿನ ಹಾಡು’ ಅಲ್ಲದೆ ‘ಕಾಡುಗಿಡದ ಹಾಡು ಪಾಡು’, ‘ಡೋಗ್ರಾ ಪಹಾರಿ ಪ್ರೇಮಗೀತೆಗಳು’ ಅವರ ಕಥಾ ಸಂಕಲನಗಳು. ‘ತಪ್ತ’, ‘ಫೀನಿಕ್ಸ್’ ಅವರ ಕಥಾ ಸಂಕಲನಗಳು. ‘ಗ್ರಾಮಾಯಣ ಸಮೀಕ್ಷೆ’, ‘ಅವಲೋಕನ’, ‘ಅಂತಃಕರಣ’ ಅವರ ಸಂಪಾದಿತ ಕೃತಿಗಳು.

ಶ್ರೀಕೃಷ್ಣ ಆಲನಹಳ್ಳಿ ಅವರ ಕಾದಂಬರಿಗಳು ಸಿನಿಮಾಗಳಾದಾಗ ಪ್ರಶಸ್ತಿಗಳಲ್ಲಿ ಕೂಡಾ ಹೆಸರು ಮಾಡಿದವು. ‘ಗೀಜಗನ ಗೂಡು’ ಟಿ. ಎಸ್. ರಂಗ ಅವರಿಂದ, ‘ಕಾಡು’ ಗಿರೀಶ್ ಕಾರ್ನಾಡ್ ಅವರಿಂದ, ‘ಪರಸಂಗದ ಗೆಂಡೆ ತಿಮ್ಮ ‘ಮಾರುತಿ ಶಿವರಾಂ’ ಅವರಿಂದ, ‘ಭುಜಂಗಯ್ಯನ ದಶಾವತಾರಗಳು’ ಲೋಕೇಶ್ ಅವರಿಂದ ನಿರ್ದೇಶಿಸಲ್ಪಟ್ಟವು. ಕಾಡು ಚಿತ್ರದಲ್ಲಿ ಅಮರೀಶ್ ಪುರಿ ನಟಿಸಿದ್ದರು. ಅವರ ‘ಮಣ್ಣಿನ ಹಾಡು’ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆಯಿತು.

ಅವರ ಕತೆಗಳ ಮೇಲೆ ನವ್ಯದ ಪ್ರಭಾವ ಅಷ್ಟಿಷ್ಟು ಬಿದ್ದಿತ್ತೋ ಏನೋ, ಆದರೆ ಕಾದಂಬರಿಗಳೆಲ್ಲ ಆಲನಹಳ್ಳಿಯಲ್ಲೇ ಅರಳಿದಂಥವು. ಅವುಗಳಿಗೆ ಅದೆಂಥ ದೇಸಿ ಸೊಗಡು. ಬರೆಯುತ್ತಾ ಬರೆಯುತ್ತಾ ಒಂದು ಮಾಂತ್ರಿಕ ಜಗತ್ತನ್ನು ಕಟ್ಟಿಕೊಡಬಲ್ಲ ತಾಕತ್ತಿದ್ದ ಆಲನಹಳ್ಳಿ, ಹೋರಾಟದಲ್ಲಿ ತೊಡಗಿಕೊಂಡದ್ದು, ಎಲ್ಲೋ ಜಗಳ ಆಡಿದ್ದು, ಯಾರನ್ನೋ ತಡವಿಕೊಂಡು ಜಿದ್ದಿಗೆ ಬಿದ್ದದ್ದು, ರಾತ್ರಿಪೂರ ಎಚ್ಚರಿದ್ದು ಬರೆಯುತ್ತಿದ್ದದ್ದು, ಅಸಂಖ್ಯ ಪ್ರೇಯಸಿರನ್ನು ಕಟ್ಟಿಕೊಂಡು ಅಲೆಯುತ್ತಿದ್ದದ್ದು, ಅದ್ಯಾವುದೋ ಕಾಡು ಹೊಕ್ಕು ಕೂತಿರುತ್ತಿದ್ದದ್ದು – ಇವೆಲ್ಲ ಅವರ ಗೆಳೆಯರ ಊಹೆಯಲ್ಲೇ ನಿಜವಾಗುತ್ತಿದ್ದ ಸಂಗತಿಗಳು.

‘ಕಾಡು’ ಕಾದಂಬರಿಯ ಕಿಟ್ಟಿ, ‘ಪರಸಂಗ’ದ ಗೆಂಡೆತಿಮ್ಮ, ‘ದಶಾವತಾರ’ದ ಭುಜಂಗಯ್ಯ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಮುಗ್ಧರೇ. ಕಿಟ್ಟಿಯದು ಸಹಜ ಮುಗ್ಧತೆ. ಗೆಂಡೆತಿಮ್ಮ ನಮ್ಮ ಹಳ್ಳಿಯಲ್ಲಿ ಎದುರಾಗುವಂಥ ಎಡವಟ್ಟು ತರುಣ, ಭುಜಂಗಯ್ಯ ಎಲ್ಲದರಲ್ಲೂ ರೇಜಿಗೆ ಹುಟ್ಟಿ, ಮತ್ತೊಂದೇನೋ ಮಾಡಲು ಹೊರಟು ಎಲ್ಲದರಲ್ಲೂ ವಿಫಲನಾಗುವ ನಮ್ಮೊಳಗಿನ ಹುಂಬ.

ಆಲನಹಳ್ಳಿ ಅಷ್ಟು ಮುಗ್ಧರಾಗಿರಲಿಲ್ಲ ಎಂದು ಗೊತ್ತಾಗುವ ಹೊತ್ತಿಗಾಗಲೇ ಕಣ್ಮರೆಯಾಗಿದ್ದರು. ಕೆಲವು ಲೇಖಕರೇ ಹಾಗೆ, ಅವರ ಮಿತಿಗಳು ಸ್ಪಷ್ಟವಾಗುವ ಮುಂಚೆಯೇ ಬರೆಯುವುದನ್ನೂ ಬದುಕುವುದನ್ನೂ ಮುಗಿಸಿರುತ್ತಾರೆ. ಹೀಗಾಗಿ ನಮಗೆ ಅವರ ಕುರಿತು ಅದಮ್ಯವಾದ ಪ್ರೀತಿಯಷ್ಟೇ ಉಳಿಯುವಂತೆ ಮಾಡುತ್ತಾರೆ. ಶ್ರೀಕೃಷ್ಣ ಆಲನಹಳ್ಳಿ ಕನ್ನಡ ಸಾಹಿತ್ಯ ಲೋಕ ಕಂಡ ಅಪೂರ್ವ ಪ್ರತಿಭೆ. ಅವರು ನಿಧನರಾದ ಎರಡು ದಶಕಗಳು ಕಳೆದ ನಂತರದಲ್ಲಿ ಇತ್ತೀಚೆಗೆ ವಿವೇಕ ಶಾನಭಾಗರ ಸಂಪಾದಕೀಯದಲ್ಲಿ ಹಲವಾರು ಲೇಖಕರು ಕೂಡಿ ಮೂಡಿಸಿರುವ ‘ಶ್ರೀಕೃಷ್ಣ ಆಲನಹಳ್ಳಿ ವಾಚಿಕೆ’ ಅವರು ಹೇಗೆ ಕಾಲಗಳನ್ನು ಮೀರಿ ಸದಾ ಪ್ರಸ್ತುತರು ಎಂಬುದಕ್ಕೆ ಹಿಡಿದ ಕನ್ನಡಿಯಾಗಿದೆ.

-ಕನ್ನಡ ಸಂಪದ

Wednesday, April 13, 2011

ಕೆ.ಪಿ. ಪೂರ್ಣಚಂದ್ರ ತೇಜಸ್ವಿ

ಕೆ.ಪಿ. ಪೂರ್ಣಚಂದ್ರ ತೇಜಸ್ವಿ


ಜನ್ಮ ದಿನ: ೦೮-೦೯-೧೯೩೮ ಮರಣ: ೦೫-೦೪-೨೦೦೭

 ಕುವೆಂಪು ಅವರಂತಹ ಮೇಧಾವಿಗಳ ಮಗನಾಗಿ ಹುಟ್ಟಿದ ವ್ಯಕ್ತಿ, ತಂದೆಯ ಚಿಂತನೆ, ದರ್ಶನ, ಸಾಹಿತ್ಯ-ಕಲೆಯ ಮಾರ್ಗದ ಪ್ರಭಾವಲಯದಿಂದ ಹೊರಬಂದು ತನ್ನದೇ ಭಿನ್ನ ಚಿಂತನೆ, ಆದರ್ಶ, ಅನುಭವ ಅಭಿವ್ಯಕ್ತಿ ಮಾರ್ಗವನ್ನು ಕಂಡುಕೊಂಡು ಅನನ್ಯತೆಯನ್ನು ಮೆರೆಯುವುದು ಅಷ್ಟು ಸುಲಭವಲ್ಲ. ಕನ್ನಡ ಸಾಹಿತ್ಯ ಲೋಕದಲ್ಲಿ ತೇಜಸ್ವಿ ಅವರು ವಿಶಿಷ್ಟರಾಗಿ ನಿಲ್ಲುತ್ತಾರೆ. ತೇಜಸ್ವಿಯವರು ಕಥೆಗಾರರಾಗಿ ಪಡೆದ ಪ್ರಸಿದ್ಧಿಯ ಜೊತೆಗೆ, ಕೃಷಿ ಕ್ಷೇತ್ರದಲ್ಲಿ ಕಾಲಿಟ್ಟು ಪರಿಸರ ಜ್ಞಾನದ ಬಗ್ಗೆ ಅನನ್ಯ ಕಾಳಜಿ ತೋರಿದವರು. ಕನ್ನಡದಲ್ಲಿ ಬಿ.ಎ. ಆನರ್ಸ್ ಮತ್ತು ಎಂ.ಎ ಪದವಿಗಳನ್ನು ಪಡೆದ ನಂತರ ಸ್ವತಂತ್ರ ಪ್ರವೃತ್ತಿಯ ಅವರು ಅಧ್ಯಾಪಕರಾಗಲು ಇಚ್ಚಿಸದೆ ಚಿಕ್ಕಮಗಳೂರಿನ ಮೂಡಿಗೆರೆಯ ಪರಿಸರದ ಕೃಷಿ ತೋಟದಲ್ಲಿ ಆಸಕ್ತಿ ತಳೆದು ನೆಲೆಸಿದರು.

‘ಅಬಚೂರಿನ ಪೋಸ್ಟಾಫೀಸು’ ಕಥಾ ಸಂಕಲನದ ‘ಹೊಸ ದಿಗಂತದ ಕಡೆಗೆ’ ಎಂಬ ಪೀಠಿಕೆಯಲ್ಲಿ ತೇಜಸ್ವಿಯರು ಹೀಗೆ ಹೇಳುತ್ತಾರೆ. “ಲೋಹಿಯಾರವರ ತತ್ವಚಿಂತನೆ, ಕುವೆಂಪು ಅವರ ಕಲಾಸೃಷ್ಟಿ, ಕಾರಂತರ ಜೀವನದೃಷ್ಟಿ ಮತ್ತು ಬದುಕಿನಲ್ಲಿ ಪ್ರಯೋಗಶೀಲತೆ – ಈ ಮೂರೇ ನನ್ನ ಈಚಿನ ಸಾಹಿತ್ಯರಚನೆಯ ಮೇಲೆ ಗಾಢ ಪರಿಣಾಮಗಳನ್ನುಂಟು ಮಾಡಿರುವಂತಹವು”. ಈ ಮಾತುಗಳು ಅವರ ವಿಶಿಷ್ಟ ನಿಲುವುಗಳನ್ನು ಸ್ಪಷ್ಟ ಪಡಿಸುತ್ತವೆ.

ಸ್ವಭಾವತಃ ತೆಜೆಸ್ವಿಯವರು ಸನ್ಮಾನ ಪ್ರಶಸ್ತಿಗಳ ಬಗ್ಗೆ ನಿರಾಸಕ್ತರಾಗಿದ್ದರು. ಆದರೂ ಪ್ರಶಸ್ತಿ ಗೌರವಗಳು ಅವರ ಮನೆಯ ಬಾಗಿಲನ್ನು ಸದಾ ತಟ್ಟುತ್ತಲೇ ಇದ್ದವು. ಅವರ ಕಥೆ ‘ಅಬಚೂರಿನ ಪೋಸ್ಟಾಫೀಸು’ ಚಲನಚಿತ್ರವಾಗಿ ಅತ್ಯುತ್ತಮ ಪ್ರಾಂತೀಯ ಚಿತ್ರ ಪ್ರಶಸ್ತಿಯನ್ನು ರಾಷ್ಟ್ರಮಟ್ಟದಲ್ಲಿ ಗಳಿಸಿತು. ಅತ್ಯುತ್ತಮ ಚಿತ್ರಕ್ಕೆ ಮೀಸಲಾದ ಸ್ವರ್ಣ ಕಮಲ ಪ್ರಶಸ್ತಿ ಅವರ ‘ತಬರನ ಕತೆ’ ಚಿತ್ರಕ್ಕೆ ದೊರೆಯಿತು. 1985ರಲ್ಲಿ ‘ಚಿದಂಬರ ರಹಸ್ಯ’ ಕಾದಂಬರಿಗೆ ಆ ವರ್ಷದ ಶ್ರೇಷ್ಠ ಕೃತಿಯೆಂದು ವಿಶೇಷ ಬಹುಮಾನ ನೀಡಲಾಯಿತು. ಅಲ್ಲದೆ, ‘ಚಿದಂಬರ ರಹಸ್ಯ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರವೂ 1987ರಲ್ಲಿ ಲಭಿಸಿ ತೇಜಸ್ವಿ ಅವರು ರಾಷ್ಟ್ರ ಮನ್ನಣೆಗೆ ಪಾತ್ರರಾದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಅವರನ್ನು 1987ರ ಗೌರವ ಪ್ರಶಸ್ತಿ ನೀಡಿ ಪುರಸ್ಕರಿಸಿತು.

‘ಸ್ವಗತ ಲಹರಿ ಮತ್ತು ಇತರ ಕವನಗಳು’ ಕವಿತೆಗಳ ಸಂಗ್ರಹವಾದರೆ, ‘ಹುಲಿಯೂರಿನ ಸರಹದ್ದು’, ‘ಅಬಚೂರಿನ ಪೋಸ್ಟಾಫೀಸು’ ‘ಕಿರಗೂರಿನ ಗಯ್ಯಾಳಿಗಳು’, ‘ಏರೋಪ್ಲೇನ್ ಚಿಟ್ಟೆ’, ‘ಮಿಸ್ಸಿಂಗ್ ಲಿಂಕ್’, ‘ಮಿಲೇನಿಯಂ ಸರಣಿ’ , 'ಪರಿಸರದ ಕತೆ' ಇವು ಕಥಾ ಸಂಗ್ರಹಗಳು. ‘ಯಮಳ ಪ್ರಶ್ನೆ’ ಏಕಾಂಕ ನಾಟಕ. ‘ವ್ಯಕ್ತಿ ವಿಶಿಷ್ಟ ಸಿದ್ಧಾಂತ’, ‘ಸ್ವರೂಪ’, ‘ನಿಗೂಢ ಮನುಷ್ಯರು’ ಇವು ವೈಚಾರಿಕ ಪ್ರಬಂಧಗಳ ಸಂಗ್ರಹ. ‘ಕರ್ವಾಲೋ’, ‘ಚಿದಂಬರ ರಹಸ್ಯ’, ‘ಕಾಡು ಮತ್ತು ಕ್ರೌರ್ಯ’, ‘ಜುಗಾರಿ ಕ್ರಾಸ್’ ಇವು ಕಾದಂಬರಿಗಳು.'ಅಲೆಮಾರಿಯ ಅಂಡಮಾನ್ ಹಾಗೂ ಮಹಾನದಿ ನೈಲ್' ಪ್ರವಾಸ ಕಥನದ ಜೊತೆಗೆ ಒಂದು ನದಿಯ ಇತಿಹಾಸವನ್ನು ತೋರುತ್ತವೆ. ‘ಅಣ್ಣನ ನೆನಪು’, ತಂದೆ ಕುವೆಂಪು ಅವರ ಬಗೆಗಿನ ನೆನಪು ಮತ್ತು ಹಲವು ಚಿಂತನೆಗಳನ್ನು ಒಳಗೊಂಡಿದೆ. ಸಹಜ ಕೃಷಿಯಂತಹ ಸಣ್ಣ ಪುಸ್ತಕಗದಲ್ಲಿ, ಪ್ಹುಕೋಕನ ಸಹಜ ಕೃಷಿ ಪದ್ಧತಿಯ ಬಗ್ಗೆ ಬರೆದಿರುವ ಅವರ ಕಥನ, ಕೃಷಿಯ ಬಗ್ಗೆ ಯಾವುದೇ ಜ್ಞಾನ ಇಲಾದವನಿಗೂ ಇಡೀ ಬದುಕಿನ ಬಗೆಗೆ ಹೊಸ ವ್ಯಾಖ್ಯಾನ ಓದಿದ ಅನುಭವವಾಗುತ್ತದೆ.

ಎಲ್ಲ ಮೂಢ ನಂಬಿಕೆಗಳನ್ನೂ ಸಾರಾ ಸಗಟಾಗಿ ತಿರಸ್ಕರಿಸುವ; ಸೊಗಸಾದ ಹಾಸ್ಯದ, ವೈಜ್ಞಾನಿಕ ಮನೋಭಾವನೆಯ; ಸತ್ಯವನ್ನು ಶೋಧಿಸುತ್ತೇನೆ ಆದರೆ, ಎಲ್ಲಾ ರಹಸ್ಯವನ್ನೂ ಭೇದಿಸಿ ಬಿಡುತ್ತೇನೆ ಎಂಬ ಅಹಂಕಾರ ಇಲ್ಲದ; ತಿಳಿದಷ್ಟೇ ಅರಿವು, ಅನ್ವೇಷಣೆಯ ಅನುಭವವೇ ಸಾರ್ಥಕ್ಯ; ರೋಗ ಗ್ರಸ್ಥ ಸಮಾಜ – ವ್ಯವಸ್ಥೆಗಳ ಗುರುತಿಸುವಿಕೆಯಲ್ಲಿ ಕೂಡ ಎಲ್ಲಕ್ಕೂ ಪರಿಹಾರ ಹೇಳಿಬಿಡುತ್ತೇನೆ ಎಂಬ ಯಾವುದೇ ಆತುರತೆ ಇಲ್ಲದೆ, ಮನುಷ್ಯನ ಸಂಬಂಧಗಳ ಆಳದಲ್ಲಿ ಜೀವನದ ಬಗ್ಗೆ ಕಾಳಜಿ, ಪ್ರೀತಿ ಮತ್ತು ಆಶಯಗಳನ್ನು ಗುರುತಿಸುವ ಮನೋಭಾವಗಳನ್ನು ಅವರ ಎಲ್ಲ ಬರವಣಿಗೆಗಳು ಮತ್ತು ಅವರು ನಡೆಸಿದ ಬದುಕಿನ ರೀತಿಯಲ್ಲಿ ಕಾಣಬಹುದಾಗಿದೆ.
ಅಭಿನಂದನೆಗಳು: ಕನ್ನಡ ಸಂಪದ

Tuesday, April 12, 2011

ಫೆರ್ಡಿನೆಂಡ್ ಕಿಟೆಲ್




ಫೆರ್ಡಿನೆಂಡ್ ಕಿಟೆಲರು (1832-1903) ಕನ್ನಡವನ್ನು ಶ್ರೀಮಂತಗೊಳಿಸಿದ ಅಗ್ರಗಣ್ಯರಲ್ಲಿ ಪ್ರಾತಃಸ್ಮರಣೀಯರು. ಜರ್ಮನಿಯ ರಾಸ್ಟರ್ ಹಾಫ್ ಎಂಬ ಊರಲ್ಲಿ 1832ರ ಏಪ್ರಿಲ್ ತಿಂಗಳ 8ರಂದು, ಫೆರ್ಡಿನಾಂಡ್ ಕಿಟೆಲ್ ಜನಿಸಿದರು. ಹತ್ತೊಂಬತ್ತನೆಯ ಶತಮಾನದಲ್ಲಿ ತಮ್ಮ ತಾಯ್ನಾಡಾದ ಜರ್ಮನಿಯ ಬಾಸೆಲ್ ಮಿಶನ್ ಮೂಲಕ ಕರ್ನಾಟಕಕ್ಕೆ ಬಂದು ಕನ್ನಡ ಭಾಷೆಯನ್ನು ತನ್ನ ಭಾಷೆಯನ್ನಾಗಿ ಸ್ವೀಕರಿಸಿ ಕನ್ನಡದಲ್ಲಿ ಸರ್ವಸಂಗ್ರಾಹಕ ವಿವರಣಾತ್ಮಕ ಶಬ್ಧಕೋಶ, ಸಾಹಿತ್ಯ ರಚನೆ, ಪಠ್ಯಪುಸ್ತಕ ನಿರ್ಮಾಣ, ವ್ಯಾಕರಣ ಗ್ರಂಥಗಳು, ಗ್ರಂಥ ಸಂಪಾದನೆ, ಛಂದಸ್ಸು, ಸಾಹಿತ್ಯ ಚರಿತ್ರೆ, ಅನ್ಯಧರ್ಮೀಯ ಅಧ್ಯಯನ ಮೊದಲಾದ ವಿದ್ವತ್ – ಕ್ಷೇತ್ರಗಳಲ್ಲಿ ಮಹತ್ತರವಾದ ಸಾಧನೆಗೈದರು.

ಬಾಸೆಲ್ ನಗರದ ಮಿಶನ್ ಸಂಸ್ಥೆಯ ಮೂಲಕ ಭಾರತಕ್ಕೆ ಕಳುಹಿಸಲ್ಪಟ್ಟ ಕಿಟೆಲ್ 1854ರ ಅಕ್ಟೋಬರ್ 20ರಂದು ಮಂಗಳೂರನ್ನು ತಲುಪಿದರು. ಆ ಬಳಿಕ ಅವರು ಧಾರವಾಡಕ್ಕೆ ಬಂದರು. 1856ರ ವರೆಗೆ ಹುಬ್ಬಳ್ಳಿ-ಧಾರವಾಡಗಳಲ್ಲಿ ತಮಗೆ ಕೊಟ್ಟ ಕೆಲಸದಲ್ಲಿ ಭಕ್ತಿಯಿಂದ ನಿರತರಾಗಿದ್ದರು.

ಕಿಟೆಲರಿಗೆ ಹೀಬ್ರೂ, ಗ್ರೀಕ್, ಲ್ಯಾಟಿನ್, ಫ್ರೆಂಚ್ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಪ್ರಾವೀಣ್ಯತೆ ಇತ್ತು. ಅದೇ ಮಟ್ಟದಲ್ಲಿ ಸ್ಥಳೀಯ ಜನ ಭಾಷೆಯಾದ ಕನ್ನಡವನ್ನು ಕಲಿಯಬೇಕೆಂಬ ಆಸೆ ಉಂಟಾಯಿತು. ಈ ಕಾರಣಕ್ಕಾಗಿ ಕಿಟೆಲರು ಮಂಗಳೂರಿಗೆ ಆಗಮಿಸಿ ಅಲ್ಲಿ ಅತ್ಯುತ್ಸಾಹದಿಂದ ಕನ್ನಡ ಅಧ್ಯಯನ ಆರಂಭಿಸಿದರು. ಕನ್ನಡದ ಜೊತೆ ಜೊತೆಯಲ್ಲಿ ಸಂಸ್ಕೃತ, ತುಳು, ಮಲಯಾಳಂ ಭಾಷೆಗಳನ್ನೂ ಪರಿಚಯಿಸಿಕೊಂಡರು. 1883-84ರಲ್ಲಿ ಧಾರವಾಡದ ಬಾಸೆಲ್ ಮಿಶನ್ ಹೈಸ್ಕೂಲಿನ ಪ್ರಾಂಶುಪಾಲರಾಗಿ ಕಿಟೆಲರು ಕೆಲಸ ಮಾಡಿದರು. 1886ರ ಅಕ್ಟೋಬರ್ 13ರಂದು ಅವರು ಧಾರವಾಡದಿಂದ ಮಡಿಕೇರಿಗೆ ಹೋದರು.

ಕಿಟೆಲರ ಚಿರಸ್ಮರಣೀಯ ಕೃತಿಯಾದ ಕನ್ನಡ –ಇಂಗ್ಲಿಷ್ ಡಿಕ್ಷನರಿ (1894)ಯನ್ನು ಅಂದು ಭಾರತದಲ್ಲಿ ಯಾರೂ ಗಮನಿಸದಿದ್ದರೂ ಜರ್ಮನಿಯ ಟ್ಯುಬಿಂಗನ್ ವಿಶ್ವವಿದ್ಯಾಲಯ ಅದನ್ನು ಗುರುತಿಸಿ ಕಿಟೆಲರಿಗೆ ಗೌರವ ಡಾಕ್ಟರೇಟ್ ಪದವಿಯನ್ನಿತ್ತು ಕೃತಾರ್ಥಗೊಂಡಿತು. ಕನ್ನಡದ ಕಾರ್ಯಕ್ಕೆ ಸಂದ ಪ್ರಪ್ರಥಮ ಡಾಕ್ಟರೇಟ್ ಪದವಿಯಿದು.

ಕಿಟೆಲರ ಕೊನೆಯ ಗ್ರಂಥವಾದ A Grammar of the Kannada Language (1903) ಕೃತಿ ತಮ್ಮ ಕೈ ಸೇರಿದ ಕೆಲವೇ ದಿನಗಳಲ್ಲಿ ಡಿಸೆಂಬರ್ 19, 1903ರಂದು ಕಿಟೆಲರು ನಿಧನರಾದರು.

ಕಿಟೆಲರು 1855ರಲ್ಲಿ ಬೈಬಲಿನ ಎರಡನೆಯ ಹೊಸ ಒಡಂಭಡಿಕೆಯ ಕೆಲವು ಭಾಗಗಳನ್ನು ಭಾಷಾಂತರಿಸಿದರು. 1858ರಿಂದ ‘ಸಂಸಾರ ಕ್ರಮ’, ‘ಉಭಯ ಮಾರ್ಗ’, ‘ನಂಬಿ ಜೀವಿಸಿರಿ’, ‘ಡೇನಿಯಲನೂ ಅವನ ಜತೆಗಾರರೂ’ ಎಂಬಿತ್ಯಾದಿ ಪ್ರಬಂಧಗಳನ್ನು ಪ್ರಕತಿಟಿಸಿದರಲ್ಲದೆ ಹಲವಾರು ಉತ್ತಮ ಗುಣಮಟ್ಟದ ಪಠ್ಯಪುಸ್ತಕಗಳನ್ನೂ ಬರೆದರು.

ಕಿಟೆಲರ ಸ್ವಂತ ಪದ್ಯ ಕೃತಿ ‘ಕಥಾಮಾಲೆ’ 1862ರಲ್ಲಿ ಪ್ರಕಟವಾಯಿತು. ಅದು ಏಸುವಿನ ಜೀವನ ವೃತ್ತಾಂತದ ಕಥನ ಆಗಿದೆ. ಇದರಲ್ಲಿ 280 ಭಾಮಿನಿ ಷಟ್ಪದಿ, 75 ವಾರ್ಧಕ ಷಟ್ಪದಿ ಹಾಗೂ 175 ಪೂರ್ವೀರಾಗದ ಹಾಡುಗಳಿವೆ. ಕಿಟೆಲ್ ಮಂಗಳೂರಿನ ‘ವಿಚಿತ್ರ ವರ್ತಮಾನ ಸಂಗ್ರಹ’, ‘ಸಚಿತ್ರ ಕನ್ನಡ ಮಾಸ ಪತ್ರಿಕೆ’ಗಳಲ್ಲಿ ದುಡಿದುದಲ್ಲದೆ, ಬಿ. ಎಲ್. ರೈಸ್ ಅವರು ನಡೆಸುತ್ತಿದ್ದ ‘ಅರುಣೋದಯ’ ಪತ್ರಿಕೆಯ ಸಹ ಸಂಪಾದಕರಾಗಿ ಸಹಾ ದುಡಿದಿದ್ದಾರೆ. ಹೆನ್ರಿ ಮೊರಿಸ್ ಬರೆದ ‘History of England’ ಎಂಬ ಚರಿತ್ರೆಯ ಗ್ರಂಥವನ್ನು 1864ರಲ್ಲಿ ಕನ್ನಡಕ್ಕೆ ಅನುವಾದಿಸಿದರು. ಅದೇ ವರ್ಷ ಅವರ ‘ಪಂಚತಂತ್ರ’ ಬೆಳಕನ್ನು ಕಂಡಿತು.

1865ರಲ್ಲಿ ‘Coorg Superstitions’ ಎಂಬ ಲೇಖನದಲ್ಲಿ ಕೊಡಗಿನಲ್ಲಿಯ ಭೂತಾರಾದನೆಯನ್ನು ಪ್ರಸ್ತಾಪಿಸಿ ಗುಳಿಗ, ಕುಟ್ಟಿಚಾತ, ಕಲ್ಲುರ್ಟಿ, ಪಂಜುರ್ಲಿ, ಕರಿಂಗಾಳಿ ಮೊದಲಾದ ಭೂತಗಳ ಆರಾಧನೆಯನ್ನು ಐತಿಹಾಸಿಕವಾಗಿ ಕಿಟೆಲ್ ಪರಿಶೀಲಿಸಿದ್ದಾರೆ. ‘ಯೇಸು ಕ್ರಿಸ್ತನ ಶ್ರಮ ಚರಿತ್ರೆ’ಯಲ್ಲಿ ಯೇಸು ಅನ್ಯರಿಗಾಗಿ ಪಟ್ಟ ಶ್ರಮದ ಕಥೆ ಇದೆ. ಇದು ಸರಳ ಕನ್ನಡ ಗದ್ಯಶೈಲಿಗೆ ಉತ್ತಮ ಉದಾಹರಣೆಯಾಗಿದೆ. 1865ರಲ್ಲಿ ಕಿಟೆಲ್ಲರಿಂದ ‘ಕನ್ನಡ ಸಂಗೀತಗಳು’ ಎಂಬ ಸಂಕಲನ ರಚಿತವಾಗಿ ಬೆಳಕನ್ನು ಕಂಡಿತು. ಇದರಲ್ಲಿ ದೇಶಿಯ ಕವಿಗಳ ಪದ್ಯಗಳ ಸಂಗ್ರಹವಲ್ಲದೆ ತಮ್ಮ ಸ್ವಂತ ಧಾರ್ಮಿಕ ಕವನಗಳೂ ಇದ್ದವು. ಆ ವರ್ಷ ಪ್ರಾರಂಭಗೊಂಡ ‘ವೃತ್ತಾಂತ ಬೋಧಿನಿ’ ಪತ್ರಿಕೆಯಲ್ಲಿ ಕಿಟೆಲರು ಕನ್ನಡ ಸಾಹಿತ್ಯ ಮತ್ತು ಚರಿತ್ರೆಯನ್ನು ಕುರಿತ ಅನೇಕ ವಿದ್ವತ್ಪೂರ್ಣ ಲೇಖನಗಳನ್ನು ಬರೆದಿದ್ದಾರೆ. ಕಿಟೆಲರು 1965ರಲ್ಲಿ ‘ಸಂಕ್ಷೇಪ ವ್ಯಾಕರಣ’ ಎಂಬ ಕನ್ನಡದ ವ್ಯಾಕರಣವನ್ನು ಪ್ರಕಟಿಸಿ ಆ ಬಳಿಕ ಅದನ್ನು ಪರಿಷ್ಕರಿಸಿ ‘ಹಳೆಗನ್ನಡ ವ್ಯಾಕರಣ ಸೂತ್ರಗಳು’ ಎಂಬುದಾಗಿ 1866ರಲ್ಲಿ ಬೆಳಕಿಗೆ ತಂದರು. 1865ರಲ್ಲಿ ಬೆಳಕನ್ನು ಕಂಡ ‘ಸಂಣ ಕರ್ನಾಟಕ ಕಾವ್ಯಮಾಲೆ’ ಎಂಬ ಕವನ ಸಂಗ್ರಹದಲ್ಲಿ ‘ಬಸವ ಪುರಾಣ’, ‘ಪ್ರಭುಲಿಂಗಲೀಲೆ’, ‘ಕುಮಾರವ್ಯಾಸ ಭಾರತ’, ‘ಭಾಗವತ’, ‘ಗಿರಿಜಾ ಕಲ್ಯಾಣ’ ಇತ್ಯಾದಿ ಪ್ರಾಚೀನ ಕನ್ನಡ ಕವಿಗಳ ಪದ್ಯಗಳೊಂದಿಗೆ ತಮ್ಮ ಸ್ವಂತ ಕವನಗಳನ್ನೂ ಸೇರಿಸಿ ಈ ಪದ್ಯಗಳಿಗೆ ಸಂಬಂಧಿಸಿದಂತೆ ವಿಸ್ತೃತ ಪದಕೋಶವನ್ನೂ ಕೂಡಿಸಿದ್ದರು. 1868ರ ‘ಕರ್ನಾಟಕ ವಾಗ್ವಿಧಾಯಿನಿ’ ಸಾಹಿತ್ಯ ಪತ್ರಿಕೆಯಲ್ಲಿ ರೈಸ್, ಸ್ಯಾಂಡರ್ಸನ್ ಮೊದಲಾದವರೊಡನೆ ಸೇರಿಕೊಂಡು ಕನ್ನಡ ವ್ಯಾಕರಣವನ್ನು ಧಾರಾವಾಹಿಯಾಗಿ ಪ್ರಕಟಿಸಿದ್ದಾರೆ.

1871ರವೇಳೆಗೆ ಬಾಸೆಲ್ ಮಿಶನ್ ಸಂಸ್ಥೆ ಕಿಟೆಲರ ಕನ್ನಡ ಭಾಷಾ ಪ್ರಭುತ್ವ ಹಾಗೂ ವಿದ್ವತ್ತನ್ನು ಗಮನಿಸಿ ಕನ್ನಡ-ಇಂಗ್ಲಿಷ್ ಶಬ್ದಕೋಶವನ್ನು ರಚಿಸಲು ಅವರನ್ನು ಒತ್ತಾಯಿಸಿತು. 1872ರಲ್ಲಿ ಕಿಟೆಲರು ಕೇಶೀರಾಜನ ‘ಶಬ್ದಮಣಿದರ್ಪಣ’ವನ್ನು 9 ಹಸ್ತಪ್ರತಿಗಳ ಆಧಾರದಿಂದ ಸಂಪಾದಿಸಿ ಅಲ್ಲಿಯ ಸೂತ್ರಗಳ ಸಾರಾಂಶವನ್ನು ಇಂಗ್ಲಿಷಿಗೆ ಭಾಷಾಂತರಿಸಿದರು. 1872ರಿಂದ ಅವರು ಇಂಗ್ಲಿಷಿನಲ್ಲಿ ಬರೆದ 24 ಅಮೂಲ್ಯ ಲೇಖನಗಳು ‘Indian Antiquery’ ಎಂಬ ನಿಯತಕಾಲಿಕೆಯಲ್ಲಿ ಸಿಗುತ್ತದೆ. ಅವುಗಳಲ್ಲಿ ದ್ರಾವಿಡ ಸಂಖ್ಯಾವಾಚಕಗಳಲ್ಲದೆ ಹಲವಾರು ದ್ರಾವಿಡ ಪದಗಳ ನಿಷ್ಪತ್ತಿಯನ್ನು ಕುರಿತೂ ಚರ್ಚಿಸಿದ್ದಾರೆ. ಯೂರೋಪಿಯನ್ ಭಾಷೆಗಳಲ್ಲಿಯೂ ಅವರು ಕನ್ನಡ ಹಾಗೂ ಇತರ ದ್ರಾವಿಡ ಭಾಷೆಗಳ ಬಗೆಗೆ ಲೇಖನಗಳನ್ನು ಬರೆದಿದ್ದಾರೆ.

1873ರಲ್ಲಿ ಮಂಗಳೂರು ಬಾಸೆಲ್ ಮಿಶನ್ ಪ್ರಕಟಣಾಲಯದವರು ಕಿಟೆಲರು ಅನುವಾದಿಸಿದ ‘ಹೊಸ ಒಡಂಬಡಿಕೆ’ಯನ್ನು ಬೆಳಕಿಗೆ ತಂದರು. ಇದು ಅವರ ಹೆಸರುವಾಸಿ ಬೈಬಲ್ ಕೃತಿ. ಅದೇ ವರ್ಷ ಕರ್ನಾಟಕದ ವೈಷ್ಣವ ದಾಸರ ಬಗೆಗೆ ಸಂಶೋಧನೆ ನಡೆಯಿಸುತ್ತಾ ಪುರಂದರ, ಕನಕ, ಮಾಧವ, ವಿಠ್ಠಲ, ವಿಜಯದಾಸ, ವೆಂಕಟದಾಸ ಮೊದಲಾದವರ ಕೃತಿಗಳನ್ನು ಸಂಗ್ರಹಿಸಿ, ಅವುಗಳಲ್ಲಿ ಕೆಲವನ್ನು ಇಂಗ್ಲಿಷಿಗೆ ಅವರು ಭಾಷಾಂತರಿಸಿದರು. 1875ರಲ್ಲಿ ‘ಕರ್ನಾಟಕ ಕಾವ್ಯಮಾಲೆ’ ಪ್ರಕಟವಾಯಿತು. ಅದೇ ವರ್ಷ ನಾಗವರ್ಮನ ‘ಛಂದೋಬುಧಿ’ಯನ್ನು ಮುದ್ರಿಸಿ ಪ್ರಕಟಿಸಿದರು. ಅಲ್ಲಿಯತನಕ ತಾಳೆಯಗರಿಗಳಲ್ಲಿದ್ದ ಇಂಥಹ ಕೃತಿಗಳನ್ನು ಪ್ರಕಟಿಸಿದ ಕೀರ್ತಿ ಕಿಟೆಲರಿಗೆ ಸಲ್ಲುತ್ತದೆ. ಕನ್ನಡದಲ್ಲಿ ವೈಜ್ಞಾನಿಕ ರೀತಿಯ ಗ್ರಂಥ ಸಂಪಾದನೆ ಕಿಟೆಲ್ ಅವರಿಂದಲೇ ಆರಂಭವಾದುದರಿಂದ ಅವರೇ ಈ ಕ್ಷೇತ್ರದ ಪಿತಾಮಹರು.

1875ರಲ್ಲಿ “Lingayat Lengends’ ಎಂಬ ತಮ್ಮ ಸುದೀರ್ಘ ಲೇಖನದಲ್ಲಿ ವೀರಶೈವ ಧರ್ಮ, ಇತಿಹಾಸ, ಸಾಹಿತ್ಯದ ಬಗೆಗೆ ಅರ್ಥಗರ್ಭಿತವಾಗಿ ಬರೆದಿದ್ದಾರೆ. ಅದೇ ವರ್ಷ “Jaina, Vaishnava and Shaiva Literature” ಎಂಬ ಸಂಶೋಧನಾತ್ಮಕ ಲೇಖನದಲ್ಲಿ ಕನ್ನಡ ಸಾಹಿತ್ಯ ಚರಿತ್ರೆಯ ಸ್ಥೂಲ ಚಿತ್ರಣ ನೀಡಿದ್ದಾರೆ. ಇನ್ನೊಂದೆಡೆ ನಿಜಗುಣ ಶಿವಯೋಗಿ ವೀರಶೈವನೆಂದು ಆಧಾರಸಮೇತವಾಗಿ ತೀರ್ಮಾನಿಸಿದ್ದಾರೆ. 1876ರಲ್ಲಿ Washerman Virasena ಎಂಬ ಕಥೆಯ ಮೂಲಕ ವೀರಶೈವ ಪುರಾಣದ ಪರಿಚಯವನ್ನು ಕಿಟೆಲ್ ಮಾಡಿದ್ದಾರೆ. 1877ರಲ್ಲಿ ‘ಕರ್ನಾಟಕ ಕಾವ್ಯಮಂಜರಿ’ಯನ್ನು ಪ್ರಕಟಿಸಿದರು. ಇದರಲ್ಲಿ ಅವರು ಹಳಗನ್ನಡದ ಸೊಗಸಾದ ಪದ್ಯಗಳನ್ನು ಆಯ್ದು, ಸ್ವಕವನಗಳನ್ನೂ ಸೇರಿಸಿದ್ದಾರಲ್ಲದೆ, ಟೀಕೆ, ಶಬ್ದಕೋಶ ಇತ್ಯಾದಿಗಳನ್ನು ಕೂಡಿಸಿದ್ದಾರೆ. 1877ರಲ್ಲಿ ಇಲ್ಲಿಯ ಹವೆಯ ಅನಾನುಕೂಲತೆಯಿಂದಾಗಿ ಕಿಟೆಲ್ ತಮ್ಮ ಶಬ್ದಕೋಶದ ಹಸ್ತಪ್ರತಿಯೊಂದಿಗೆ ಜರ್ಮನಿಗೆ ತೆರಳಿದರು. 1877ರಲ್ಲಿ ‘The Kongu Inscriptions’ ಎಂಬ ಲೇಖನವನ್ನೂ , 1878ರಲ್ಲಿ ‘ಕೆನರೀಸ್ – ಇಂಗ್ಲಿಷ್ ಡಾಯಲಾಗ್’ ಎಂಬ ಪುಸ್ತಕವನ್ನೂ ಬರೆದರು. ಈ ಪುಸ್ತಕದಲ್ಲಿ ಶಿಕ್ಷಕರು ಕಲಿಸುವ ರೀತಿಯನ್ನು ತೋರಿಸಿಕೊಟ್ಟಿದ್ದಾರೆ. 1880ರಲ್ಲಿ ಸಂಸ್ಕೃತ ಸಣ್ಣ ವ್ಯಾಕರಣ ಎಂಬ ಕಿರುಹೊತ್ತಗೆಯನ್ನು ಬರೆದರು. ಅದು ಬಹಳ ಜನಪ್ರಿಯವಾಗಿತ್ತು.

1882ರಲ್ಲಿ ಕಿಟೆಲ್ ಧಾರವಾಡಕ್ಕೆ ಬಂದು ಕನ್ನಡ –ಇಂಗ್ಲಿಷ್ ಶಬ್ದಕೋಶದ ರಚನಾಕಾರ್ಯವನ್ನು ಮುಂದುವರೆಸಿದರು. 1889ರಲ್ಲಿ ‘ಹಳಗನ್ನಡ ವ್ಯಾಕರಣ ಸೂತ್ರಗಳು’ ಪ್ರಕಟವಾಯಿತು. ಅದೇ ವರ್ಷ ಧಾರವಾಡದ ಅನೇಕ ವಿದ್ವಾಂಸರೊಂದಿಗೆ ವಿಚಾರ ವಿನಿಮಯ ನಡೆಯಿಸಿ ‘ಕನ್ನಡ-ಇಂಗ್ಲಿಷ್ ಶಬ್ದಕೋಶ’ದ ಹಸ್ತ ಪ್ರತಿಯನ್ನು ಮುದ್ರಣಕ್ಕಾಗಿ ಮಂಗಳೂರಿನ ಬಾಸೆಲ್ ಮಿಶನ್ ಪ್ರೆಸ್ಸಿಗೆ ಒಪ್ಪಿಸಿದರು. ಅದು 1894ರಲ್ಲಿ ಬೆಳಕನ್ನು ಕಂಡಿತು.

ಕಿಟೆಲ್ಲರ ‘ಕನ್ನಡ-ಇಂಗ್ಲಿಷ್ ಶಬ್ದಕೋಶ’ ಕನ್ನಡದ ಹಾಗೂ ಭಾರತೀಯ ಭಾಷೆಗಳಲ್ಲಿ ಅತ್ಯಂತ ಪ್ರಮಾಣಬದ್ಧವಾದ ಹಾಗೂ ವೈಜ್ಞಾನಿಕ ಪದ್ಧತಿಯನ್ನೊಳಗೊಂಡ ಸರ್ವಸಂಗ್ರಾಹಕ ವಿವರಣಾತ್ಮಕ ಶಬ್ದಕೋಶವಾಗಿದೆ. ಈ ಮೇರುಕೃತಿಯಲ್ಲಿ 1762 ಬೃಹತ್ ಗಾತ್ರದ ಪುಟಗಳಿವೆಯಲ್ಲದೆ ಸುಮಾರು 70,000 ಶಬ್ಧಗಳನ್ನು ಅದು ಒಳಗೊಂಡಿದೆ. ಈ ಕೋಶದ ಪುಟ ಪುಟಗಳಲ್ಲಿ ಕಿಟೆಲರ ಅಪಾರ ವಿದ್ವತ್ತು ಪುಟಿದು ಕಾಣುತ್ತದೆ. 1889ರಿಂದ ಅದರ ಮುದ್ರಣ ಪ್ರಾರಂಭಗೊಂಡು 1894ರಲ್ಲಿ ಅದು ಮುಗಿದಾಗ ಕಿಟೆಲರು ಕಣ್ಣುನೋವು ಮತ್ತು ತಲೆನೋವುಗಳಿಂದ ನರಳುತ್ತಿದ್ದರು. ತಮ್ಮ ಹುಟ್ಟೂರಿನಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾಗಲೇ ಶಬ್ದಕೋಶ ಪರಿವೀಕ್ಷಣಾ ಕಾರ್ಯವನ್ನು ಮಾಡಿದ್ದರಲ್ಲದೆ ಬಹು ಉಪಯುಕ್ತ ಮುನ್ನುಡಿಯನ್ನು ಬರೆದು 1893ರಲ್ಲಿ ಕಳುಹಿಸಿದರು. 1894ರಲ್ಲಿ ಕಿಟೆಲರ ಪರಮೋಚ್ಚವಾದ ಈ ಕೃತಿ ಬೆಳಕನ್ನು ಕಂಡಿತು.

ಕೋಶದಲ್ಲಿ ಅಡಕವಾಗಿರುವ ಅಪಾರವಾದ ಶಬ್ದಸಂಪತ್ತು, ಕನ್ನಡದ ವಿವಿಧ ಪ್ರಾದೇಶಿಕ ಹಾಗೂ ಸಾಮಾಜಿಕ ಉಪಭಾಷೆಗಳ ಮಾತುಗಳು; ಗಾದೆ ನಾಣ್ಣುಡಿಗಳು; ಹಳಗನ್ನಡ, ಹೊಸಗನ್ನಡ ಪ್ರಯೋಗಗಳು ಕಿಟೆಲರ ಪರಿಶ್ರಮ, ಕರ್ತವ್ಯನಿಷ್ಠೆ, ಅಚ್ಚುಕಟ್ಟುತನ, ವೈಜ್ಞಾನಿಕತೆ, ವಿದ್ವತ್ತುಗಳೆಲ್ಲವನ್ನೂ ಪ್ರತಿಬಿಂಬಿಸುತ್ತವೆ.

1903ರಲ್ಲಿ ಕಿಟೆಲರ 483ಪುಟದ 28ಅಧ್ಯಾಯಗಳ ಬೃಹತ್ ಕನ್ನಡ ವ್ಯಾಕರಣ ಗ್ರಂಥ ‘A Grammar of Kannada Language’ ಬಾಸೆಲ್ ಮಿಶನ್ ಮುದ್ರಣಾಲಯದಲ್ಲಿ ಅಚ್ಚಾಗಿ ಪ್ರಕಟವಾಯಿತು. ಆ ಮಹತ್ತರವಾದ ಕೃತಿಯಲ್ಲಿ, ಹಳಗನ್ನಡ ಮತ್ತು ಹೊಸಗನ್ನಡ ಎಂಬ ಕನ್ನಡದ ಬೆಳವಣಿಗೆಯ ವಿವಿಧ ಘಟ್ಟಗಳ ವಿವರಣೆ ಇದೆಯಲ್ಲದೆ ಪ್ರಾದೇಶಿಕ ಹಾಗೂ ಜನಪದ ಪ್ರಯೋಗಗಳನ್ನು ಕಾಣಬಹುದು.

ಸಾಂಸ್ಕೃತಿಕ ಸೇವಾಕರ್ತರು ಹಾಗೂ ಧಾರ್ಮಿಕ ಗುರುಗಳು ತಾವು ದುಡಿಯುವ ಕ್ಷೇತ್ರದ ಸಂಸ್ಕೃತಿ ಭಾಷೆ, ಸಾಹಿತ್ಯಗಳ ಬಗೆಗೆ ಆಸಕ್ತಿ ವಹಿಸಿ ಅದರ ಅಭ್ಯುದಯಕ್ಕೆ ಯಾವ ರೀತಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು ಎಂಬುದಕ್ಕೆ ಪೂಜ್ಯ ಕಿಟೆಲರು ಒಂದು ಅತ್ಯುತ್ತಮ ಉದಾಹರಣೆ.

ಹೀಗೆ ಕನ್ನಡಕ್ಕೆ ಅಪಾರವಾಗಿ ಸೇವೆ ಸಲ್ಲಿಸಿದ ಕಿಟೆಲ್ ಅವರ ಈ ಜನ್ಮದಿನದಂದು ಬಗ್ಗೆ ಅವರ ಕುರಿತು ಕನ್ನಡದ ಮಹಾನ್ ವಿದ್ವಾಂಸ, ಸಂಶೋದಕ ಮತ್ತು ಬರಹಗಾರರಾದ ಡಿ. ಎಲ್. ಎನ್ ಅವರು ಹೇಳಿರುವ ಈ ಮಾತನ್ನು ನೆನೆಯುವುದು ನಾವು ಅವರಿಗೆ ಸಲ್ಲಿಸುವ ಶ್ರೇಷ್ಠ ಗೌರವವಾಗುತ್ತದೆ. “ಶಾಸ್ತ್ರೀಯವಾದ ಮಾರ್ಗದಲ್ಲಿ ಕನ್ನಡ ವಿದ್ವತ್ತು ಬೆಳೆಯುವುದಕ್ಕೆ ಕಿಟೆಲ್ ಶ್ರಮಿಸಿದರು. ಕನ್ನಡದ ಋಷಿಗಳಲ್ಲಿ ಅವರೂ ಒಬ್ಬರು. ಜರ್ಮನಿಯಲ್ಲಿ ಹುಟ್ಟಿದ ಅವರು ಕನ್ನಡಿಗರಾಗಿ ಮೆರೆದರು. ಅವರನ್ನು ಸ್ಮರಿಸಿಕೊಳ್ಳುವುದು ಪವಿತ್ರ ವಸ್ತುವೊಂದನ್ನು ಧ್ಯಾನಿಸಿದಂತೆ ಪುಣ್ಯಕರವಾದದ್ದು.” ಡಿ. ಎಲ್. ಎನ್ ಅವರ ಈ ಮಾತು ಎಲ್ಲ ಕನ್ನಡಿಗರ ಹೃದಯದ ಮಾತಿನ ಪ್ರಾತಿನಿಧ್ಯ ದನಿಯಾಗಿದೆ.
 
ಅಭಿನಂದನೆಗಳು: ಕನ್ನಡ ಸಂಪದ

Monday, April 11, 2011

ಆರ್. ನರಸಿಂಹಾಚಾರ್



ಕನ್ನಡ ಸಾರಸ್ವತ ಪ್ರಪಂಚದಲ್ಲಿ ಅತ್ಯಂತ ಅವಿಸ್ಮರಣೀಯರಾದವರು ರಾವ್ ಬಹದ್ದೂರ್ ...ಆರ್. ನರಸಿಂಹಾಚಾರ್. ಅವರು ಖ್ಯಾತ ಸಂಶೋಧಕರಾಗಿ, ಭಾಷಾವಿಜ್ಞಾನಿಯಾಗಿ, ಶಾಸನ ತಜ್ಞರಾಗಿ, ಗ್ರಂಥ ಸಂಪಾದಕರಾಗಿ ಅನುವಾದಕರಾಗಿ, ಸೃಜನಶೀಲ ಬರಹಗಾರರಾಗಿ ವಿಮರ್ಶಕರಾಗಿ ಒಳ್ಳೆಯ ಹೆಸರು ಮಾಡಿದವರು. ತಮಿಳು ಮಾತೃಭಾಷೆಯಾಗಿದ್ದರೂ ಇಂಗ್ಲಿಷ್, ಸಂಸ್ಕೃತ, ತೆಲುಗು ಭಾಷೆಗಳಲ್ಲಿ ಪಾಂಡಿತ್ಯ ಪಡೆದು ಅವರು ಕನ್ನಡಕ್ಕೆ ಸಲ್ಲಿಸಿದ ಸೇವೆ ಅಪೂರ್ವವಾದುದು.

ಮಂಡ್ಯದ ಕೊಪ್ಪಲುವಿನಲ್ಲಿ 1861, ಏಪ್ರಿಲ್ 9ರಂದು ಜನನ. ತಂದೆ ತಿರುನಾರಾಯಣ ಪೆರುಮಾಳ್, ತಾಯಿ ಶಿಂಗಮ್ಮಾಳು. ರಾಮಾನುಜಪುರದಲ್ಲಿ ಆಚಾರ್ಯರ ಹಿರಿಯರು ವಾಸ ಮಾಡುತ್ತಿದ್ದರಾದರೂ ಅವರ ತಾತಂದಿರ ಕಾಲದಿಂದ ಆ ಮನೆತನವು ಶ್ರೀರಂಗಪಟ್ಟಣದ ಸಮೀಪದಲ್ಲಿರುವ ಮಂಡ್ಯ ಕೊಪ್ಪಲುವಿನಲ್ಲಿ ನೆಲೆಸಿದ್ದಿತು. ಅವರ ವಂಶ ತಿರುಪತಿ ಬೆಟ್ಟದ ಕೆರೆ ಕಟ್ಟಿದ ಶ್ರೀ ಆನಂದಾಳ್ವಾರರದು.

ಬಾಲ್ಯದಲ್ಲಿಯೇ ತಂದೆಯಿಂದ ಸಂಸ್ಕೃತ ಅಭ್ಯಾಸ, ಅನಂತರ ಐದು ವರ್ಷ ತಮಿಳು ಅಭ್ಯಾಸ ಮಾಡಿ ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಿಂದ 1878ರಲ್ಲಿ ಮ್ಯಾಟ್ರಿಕ್ಯುಲೇಶನ್ ಪರೀಕ್ಷೆಯಲ್ಲಿ ಪಾಸಾದರು. ಬೆಂಗಳೂರಿಗೆ ಬಂದು ತಮಿಳು ಮತ್ತು ಸಂಸ್ಕೃತಗಳನ್ನು ತೆಗೆದುಕೊಂಡು ಸೆಂಟ್ರಲ್ ಕಾಲೇಜಿನಿಂದ 1882ರಲ್ಲಿ ಬಿ.ಎ ಪರೀಕ್ಷೆಯಲ್ಲಿ ಉಚ್ಚ ತರಗತಿಯಲ್ಲಿ ಪಾಸಾದರು. ಅನೇಕ ಪಾರಿತೋಷಕಗಳನ್ನು ಪಡೆದರು.

ದಿವಾನ್ ರಂಗಾಚಾರ್ಯರಲ್ಲಿ ಉದ್ಯೋಗಕ್ಕಾಗಿ ಹೋದರು. ಒಡನೆಯೇ 5 ರೂಪಾಯಿ ಸಂಬಳದ ಮೇಲೆ ಚಿಕ್ಕಮಗಳೂರು ಹೈಸ್ಕೂಲಿನಲ್ಲಿ ಸಹೋಪಾಧ್ಯಾಯ ಹುದ್ದೆ ದೊರೆಯಿತು. ‘ಊರು ದೂರ’ ಎಂದು ಹೋಗಲು ಹಿಂಜರಿದಾಗ ದಿವಾನರೆ ತಿಳಿಹೇಳಿ ಕಳುಹಿಸಿಕೊಟ್ಟರು. ಆಮೇಲೆ ಶಿವಮೊಗ್ಗ, ಹಾಸನಗಳಲ್ಲಿ ಅಧ್ಯಾಪಕರಾಗಿ ಕೆಲಸ ಮಾಡಿದರು. ಅನಂತರ ಮೈಸೂರಿನ ಮಹಾರಾಜ ಮತ್ತು ಮಹಾರಾಣಿ ಕಾಲೇಜುಗಳಲ್ಲಿಯೂ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದರು. 1893ರಲ್ಲಿ ಮದ್ರಾಸ್ ವಿಶ್ವವಿದ್ಯಾನಿಲಯದಿಂದ ಕನ್ನಡ ಎಂ.ಎ ಪಾಸಾದರು. ಕನ್ನಡದಲ್ಲಿ ಎಂ. ಎ ಪದವಿ ಪಡೆದ ಮೊದಲಿಗರೆನಿಸಿದರು. 1894ರಲ್ಲಿ ವಿದ್ಯಾ ಇಲಾಖೆಯಲ್ಲಿ ಭಾಷಾಂತರಕಾರರೆಂದು ನೇಮಕಗೊಂಡರು. 1899ರಲ್ಲಿ ಮೈಸೂರಿನ ಪ್ರಾಚ್ಯವಸ್ತು ಸಂಶೋಧನ ಇಲಾಖೆ ಸೇರಿ ಬಿ.ಎಲ್ ರೈಸ್ ಅವರಿಗೆ ಸಹಾಯಕರಾಗಿ ಕೆಲಸ ಮಾಡಿ ರೈಸ್ ಅವರಿಗೆ ತುಂಬಾ ಆತ್ಮೀಯರಾದರು. ಹೀಗಾಗಿ ರೈಸ್ ಅವರ ನಂತರ 1906ರಲ್ಲಿ ಇಲಾಖೆಯ ನಿರ್ದೇಶಕರಾಗಿ ನೇಮಕಗೊಂಡರು. 1922ರ ವರೆಗೆ ಅದರ ನಿರ್ದೇಶಕರಾಗಿದ್ದಾಗ ಅನೇಕ ಮಹತ್ವದ ಕೃತಿಗಳನ್ನು ಹೊರತಂದರು. 16ವರ್ಷಗಳ ಕಾಲ ಈಗಿನ ಮೈಸೂರು ಸಂಸ್ಥಾನದ ನಾನ ಭಾಗಗಳನ್ನು ಸಂಚರಿಸಿ ಸುಮಾರು 5000 ಶಾಸನಗಳನ್ನು ಸಂಗ್ರಹಿಸಿದರು. ಮುಖ್ಯಮುಖ್ಯವಾದವುಗಳನ್ನು ಅಲ್ಲಲ್ಲಿ ರಿಪೋರ್ಟುಗಳಲ್ಲಿ ಚರ್ಚಿಸಿದರು. ಇವು ಅನಂತರ ಬೇರೆ ಬೇರೆ ವಿದ್ವಾಂಸರಿಂದ ಪರಿಷ್ಕಾರಗೊಂಡು ಉಪಸಂಪಟಗಳಲ್ಲಿ ಪ್ರಕಟವಾದವು.

ಆಚಾರ್ಯರು ಮೈಸೂರು ಪುರಾತತ್ವ ಇಲಾಖೆಯ ವರದಿಗಳಲ್ಲಿ ಹಿಂದೂ, ಜೈನ ಮತ್ತು ಮಹಮದೀಯರಿಗೆ ಸಂಬಂಧಿಸಿದ ಸುಮಾರು 1000 ಕಟ್ಟಡಗಳನ್ನು ಪರಿಶೀಲಿಸಿ ಅವುಗಳ ವಾಸ್ತು ವಿಷಯವನ್ನು ಕುರಿತು ಟಿಪ್ಪಣಿಗಳನ್ನು ಬರೆದಿರುವರು.

ಶ್ರವಣಬೆಳಗೊಳದ ಶಾಸನಗಳನ್ನು ಈ ಹಿಂದೆ ಬಿ.ಎಲ್. ರೈಸ್ ಅವರು ಪ್ರಕಟಿಸಿದ್ದರು (1889). ಅಲ್ಲಿ ಕೇವಲ 144 ಶಾಸನಗಳಿದ್ದವು. ಆರ್. ನರಸಿಂಹಾಚಾರ್ ಅವರು ಅದನ್ನು ಪರಿಷ್ಕರಿಸಲು ತೊಡಗಿ, ಹೊಸದಾಗಿ 356 ಶಾಸನಗಳನ್ನು ಸೇರಿಸಿ, ಒಟ್ಟು 500 ಶಾಸನಗಳುಳ್ಳ ಸಂಪುಟವನ್ನು ಹೊರತಂದರು. ಅದರ ಪ್ರಾರಂಭದ 90 ಪುಟದ ಪ್ರಸ್ತಾವನೆ ಆಚಾರ್ಯರ ವಿದ್ವತ್ತಿಗೆ ಹಿಡಿದ ಕನ್ನಡಿಯಾಗಿದೆ. ಶ್ರವಣಬೆಳಗೊಳದ ವಾಸ್ತುಶಿಲ್ಪವನ್ನು ಕುರಿತು ಮೊದಲಬಾರಿಗೆ ಇಲ್ಲಿ ವಿಸ್ತೃತವಾಗಿ ಚರ್ಚಿಸಲಾಗಿದೆ.

1923ರಲ್ಲಿ ಪ್ರಕಟವಾದ ‘ಶಾಸನ ಪದ್ಯ ಮಂಜರಿ’ಯಲ್ಲಿ ಸಾಹಿತ್ಯಾಂಶಗಳನ್ನೊಳಗೊಂಡ ಶಾಸನಗಳಿಂದಾಯ್ದ 1446 ಪದ್ಯಗಳಿವೆ. ಕವಿತೆಯ ಶೈಲಿಯ ಮತ್ತು ಸೊಬಗಿನ ರಸವನ್ನು ಸ್ವಲ್ಪ ಮಟ್ಟಿಗಾದರೂ ಆಸ್ವಾದನ ಮಾಡಲು ಅವಕಾಶವುಂಟು ಮಾಡಬೇಕೆಂಬ ಉದ್ದೇಶದಿಂದ ಈ ಶಾಸನ ಭಾಗಗಳನ್ನುಸಂಗ್ರಹಿಸಿಕೊಟ್ಟಿದೆ. ಈ ಪುಸ್ತಕ್ಕಾಗಿ ಆರಿಸಿದ ಶಾಸನಗಳ ಸಂಖ್ಯೆ 283. ಇವುಗಳಲ್ಲಿ ಬಾಂಬೆ ಪ್ರಾಂತ್ಯದಲ್ಲಿರುವ 24 ಶಾಸನ ಬಿಟ್ಟರೆ ಉಳಿದವೆಲ್ಲ ಮೈಸೂರು ಸಂಸ್ಥಾನದವು. ಅವು ಸುಮಾರು ಕ್ರಿ.ಶ. 700ರಿಂದ ಕ್ರಿ.ಶ. 1465ರ ವರೆಗಿನ ಕಾಲಾವದಿಯವು. ಅವನ್ನು ಆ ಅನುಪೂರ್ವಿಯಲ್ಲಿಯೇ ಕೊಟ್ಟಿರುವುದರಿಂದ ಕನ್ನಡ ಭಾಷೆಯು ಬೆಳೆದುಬಂದ ರೀತಿ ಗೊತ್ತಾಗುವುದು. ಈ ಶಾಸನಗಳು ಗಂಗ, ನೊಳಂಬ, ಚಾಲುಕ್ಯ, ರಾಷ್ಟ್ರಕೂಟ, ಚೋಳ, ಕಲಚೂರ್ಯ, ಸೇವುಣ, ಕೊಂಗಾಳ್ವ, ಹೊಯ್ಸಳ, ಸಾಂತರ, ಪಾಂಡ್ಯ, ಸಿಂಧ, ಕದಂಬ, ನಿಡುಗಲ್ಲು, ವಿಜಯನಗರ ಹೀಗೆ 15 ರಾಜವಂಶಗಳಿಗೆ ಸಂಬಂಧಿಸಿವೆ. ಇವು ಅಂದಿನ ರಾಜಕೀಯ, ಸಾಮಾಜಿಕ, ಧಾರ್ಮಿಕ ವಿಷಯಗಳ ಮೇಲೂ ಬೆಳಕು ಚೆಲ್ಲುತ್ತವೆ.

ಆಚಾರ್ಯರು ಇತರ ಹಲವಾರು ಸಂಶೋಧನೆಗಳನ್ನು ಸಹಾ ನಡೆಸಿದ್ದು ಅವುಗಳಲ್ಲಿ ಪ್ರಮುಖವಾದದ್ದನ್ನು ಮಾತ್ರ ಇಲ್ಲಿ ಹೆಸರಿಸುತ್ತೇನೆ. 2ನೆಯ ಹರಿಹರನ 1286ರ ತಾಮ್ರಪತ್ರ ಶಾಸನ, ಚಂದ್ರವಳ್ಳಿಯ ಉತ್ಖನನದಲ್ಲಿ ಪ್ರಾಚೀನ ಕಾಲದ ಮಣ್ಣಿನ ಪಾತ್ರೆ, ನಾಣ್ಯಗಳ ಶೋಧನೆ, ಅರಿಷ್ಟನೇಮಿಯ ಸಮಾಧಿ, ಸಿಂಹಸೂರಿ ರಚಿಸಿದ ‘ಲೋಕವಿಭಾಗ’ ಗ್ರಂಥದ ಮೂಲಕ ನರಸಿಂಹವರ್ಮನ ಮತ್ತು ಪಲ್ಲವರ ಕಾಲ ನಿರ್ಣಯ, ತಾಳಗುಂದದ ಪುರಾತನ ಶಾಸನದ ಮೂಲಕ ಕದಂಬರ ಕಾಲ ನಿರ್ಣಯ, ಬೆಂಗಳೂರು ಎಂಬ ಊರು ಹತ್ತನೆಯ ಶತಮಾನದಲ್ಲೇ ಇತ್ತು ಎಂಬ ನಿರ್ಣಯ, ಬುಕ್ಕನ ಮರಣದ ಕಾಲ, ವಿಜಯನಗರದ ಆಡಳಿತದ ಕಾಲ, ಟಿಪ್ಪು ಶೃಂಗೇರಿ ಗುರುಗಳಿಗೆ ದತ್ತಿ ಕೊಟ್ಟದ್ದು, ಮುಳುಬಾಗಿಲು ಮಠದ ತಾಮ್ರಶಾಸನವು ಭಾಗವತ ಸಂಪ್ರದಾಯದ ವಿಷಯ ಹೇಳುತ್ತದೆಂಬ ನಿರ್ಣಯ ಮುಂತಾದವು ಪ್ರಮುಖವಾಗಿವೆ. ನರಸಿಂಹಾಚಾರ್ಯರು 1920ರಲ್ಲಿ ಕಾರ್ಲಾ, ಕನ್ಹೇರಿ, ಬಾದಾಮಿ, ಎಲ್ಲೋರ ಮತ್ತು ಅಜಂತಾಗಳಿಗೆ ಭೇಟಿಕೊಟ್ಟು ಆ ಸ್ಥಳಗಳಲ್ಲಿಯ ಗುಹೆಗಳ ವಿಷಯವಾಗಿ ಮಹತ್ವದ ಸಂಗತಿಗಳನ್ನು ಬರೆದಿದ್ದಾರೆ. ಅವರು 1909ರಲ್ಲಿ ಭಾಸಕವಿಯ ಸ್ವಪ್ನವಾಸವದತ್ತ ಎಂಬ ನಾಟಕವನ್ನು ಕಂಡುಹಿಡಿದಿರುವರು.

ಇವಲ್ಲದೆ ಗಂಗರ ಚರಿತ್ರೆ, ಸಾಯಣ-ಮಾಧವ, ಬೇಲೂರು, ಸೋಮನಾಥಪುರ ಮತ್ತು ದೊಡ್ಡಗದ್ದನ ಹಳ್ಳಿಯ ಹೊಯ್ಸಳ ದೇವಸ್ಥಾನಗಳು ಇವನ್ನು ಕುರಿತೂ ಇವರು ಕೃತಿ ರಚಿಸಿದ್ದಾರೆ.

ಆರ್ ನರಸಿಂಹಾಚಾರ್ ಅವರಿಗೆ ವಿಶೇಷ ಕೀರ್ತಿಯನ್ನು ತಂದುಕೊಟ್ಟ ಕೃತಿ “ಕರ್ಣಾಟಕ ಕವಿಚರಿತೆ”. ಮೂರು ಸಂಪುಟಗಳಲ್ಲಿರುವ ಈ ಕೃತಿ ಕನ್ನಡದ ಒಟ್ಟು 1148 ಜನ ಕವಿಗಳ ಚರಿತ್ರೆಯನ್ನೊಳಗೊಂಡಿದೆ. ಇವುಗಳನ್ನು ಕವಿಚರಿತ್ರಕರು ಬರೆಯಲು ತೊಡಗಿದಾಗ ಕನ್ನಡ ಸಾಹಿತ್ಯದಲ್ಲಿ ಇನ್ನೂ ಅರುಣೋದಯದ ಕಾಲ, ಬಹಳಷ್ಟು ಕೃತಿಗಳು ಅಪ್ರಕಟಿತವಾಗಿರುವ ಸನ್ನಿವೇಶ. ಇಂಥ ಸಂದರ್ಭದಲ್ಲೂ ಸುಮಾರು 2000 ಓಲೆಯ ಪ್ರತಿಗಳನ್ನು ಕಣ್ಣಾರೆ ನೋಡಿ ಅವುಗಳ ಅಮೂಲಾಗ್ರ ಪರಿಚಯವನ್ನೂ ಕವಿ, ಕಾಲ, ದೇಶ, ಕೃತಿಗಳನ್ನು ಕುರಿತು ನಿಖರವಾದ ಅಭಿಪ್ರಾಯಗಳನ್ನು ವ್ಯಕ್ತಗೊಳಿಸಿರುವುದು ಇಲ್ಲಿಯ ವಿಶೇಷ. ಹತ್ತಾರು ಜನ ಸೇರಿ ಹತ್ತಾರು ವರ್ಷಗಳ ಸತತ ಪರಿಶ್ರಮದಿಂದ ಮಾಡಬೇಕಾದ ಕಾರ್ಯವನ್ನು ಒಬ್ಬರೇ ವ್ಯಕ್ತಿ ಮಾಡಿದ್ದು ಅಪೂರ್ವವೆನಿಸಿದೆ. ಇಡಿ ದೈತ್ಯ ಶಕ್ತಿಯ ವ್ಯಕ್ತಿಗಳಿಂದ ಮಾತ್ರ ಸಾಧ್ಯ. ಸಂಪುಟಗಳನ್ನು ಸಿದ್ಧಪಡಿಸುವಲ್ಲಿ ಅವರು ತೋರಿದ ಶ್ರಮ-ಶ್ರದ್ಧೆ-ಸಂಯಮಗಳು ಅನುಕರಣೀಯವೆನಿಸಿವೆ. ಕನ್ನಡದ ಯಾವುದೇ ಕವಿಯ ವಿಷಯವನ್ನು ತಿಳಿದುಕೊಳ್ಳಲು ಬಯಸುವವರಿಗೆ ಪ್ರಥಮ ಆಕರಗಳಾಗಿ ನಿಂತಿರುವ ಕವಿಚರಿತೆಯ ಸಂಪುಟಗಳಿಗೆ ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ಒಂದು ಚಾರಿತ್ರಿಕ ಮಹತ್ವವುಂಟು.

ಆರ್ ನರಸಿಂಹಾಚಾರ್ ಅವರು ಒಳ್ಳೆಯ ಗ್ರಂಥಸಂಪಾದಕರೂ ಹೌದು. ಅವರು 1903ರಲ್ಲಿ ಹೊಸ ಹಸ್ತಪ್ರತಿಗಳ ನೆರವಿನಿಂದ ‘ಕರ್ಣಾಟಕ ಭಾಷಾ ಭೂಷಣ’ದ ಎರಡನೆಯ ಮುದ್ರಣವನ್ನು ಮೊದಲಬಾರಿಗೆ ‘ಕಾವ್ಯಾವಲೋಕನ’ವನ್ನೂ ಒಂದೇ ಸಂಪುಟದಲ್ಲಿ ಪ್ರಕಟಿಸಿದರು. ಈ ಗ್ರಂಥಕ್ಕೆ ವಿದ್ವತ್ಪೂರ್ಣವಾದ ಇಂಗ್ಲಿಷ್ ಪೀಠಿಕೆ ಇದೆ. ಕಾವ್ಯಾವಲೋಕನವು ಮೈಸೂರು ವಿಶ್ವವಿದ್ಯಾಲಯದಿಂದ ಹಲವಾರು ಬಾರಿ ಪುನರ್ಮುದ್ರಣವಾಗಿದೆ.

ಆರ್. ನರಸಿಂಹಾಚಾರ್ ಅವರು ‘ನೀತಿಮಂಜರಿ’ ‘ನೀತಿ-ವಾಕ್ಯಮಂಜರಿ’ ಕೃತಿಗಳಿಂದ ಒಳ್ಳೆಯ ಅನುವಾದಕರು ಎಂಬ ಹೆಸರನ್ನು ಪಡೆದಿದ್ದಾರೆ. ನೀತಿಮಂಜರಿಯಲ್ಲಿ ತಮಿಳಿನ ಅಪ್ಪೈಯಾರ್, ತಿರುವಳ್ಳುವರ್, ಸಂಸ್ಕೃತದ ಕ್ಷೇಮೆಂದ್ರ, ಭರ್ತೃಹರಿ ಮೊದಲಾದವರ ಕೃತಿ ಭಾಗಗಳನ್ನಾಯ್ದು ಅನುವಾದಿಸಲಾಗಿದೆ. ಇಜಿಇ ಬೆಶ್ಚಿ ಕೃತಿಯ ಭಾಷಾಂತರವಾದ ‘ನಗೆಗಡಲು’ ಆಚಾರ್ಯರ ಹಾಸ್ಯಪ್ರಜ್ಞೆಗೆ ಒಳ್ಳೆಯ ಉದಾಹರಣೆಯಾಗಿದೆ. ಗಾಂಪರೊಡೆಯರು ಮತ್ತು ಅವರ ಶಿಷ್ಯರ ಪ್ರತಾಪಗಳಿಗೆ ಸಂಬಂಧಿಸಿದ ಇಲ್ಲಿನ ಘಟನೆಗಳು ಕಥಾರೂಪದಲ್ಲಿವೆ.

ಆರ್. ನರಸಿಂಹಾಚಾರ್ ಅವರು ಮೈಸೂರು ವಿಶ್ವವಿದ್ಯಾಲಯದ ಕೋರಿಕೆಯ ಮೇರೆಗೆ ಕನ್ನಡ ಭಾಷೆಯ ಇತಿಹಾಸವನ್ನು ಕುರಿತು ಮೈಸೂರಿನಲ್ಲಿ ಇತ್ತ ಐದು ರೀಡರ್ ಶಿಪ್ ಲೆಕ್ಚರ್ ಗಳ ಪುಸ್ತಕರೂಪವೇ ‘History of Kannadada Language (1934)’ ಕೃತಿ. ಇದೇ ಮಾಲಿಕೆಯಲ್ಲಿ ಬೆಂಗಳೂರಿನಲ್ಲಿತ್ತ ಐದು ರೀಡರ್ ಶಿಪ್ ಲೆಕ್ಚರ್ ಗಳು ‘History of Kannda Literature’ ಎಂಬ ಪುಸ್ತಕರೂಪದಲ್ಲಿ ಪ್ರಕಟವಾಗಿದೆ.

ಇವಲ್ಲದೆ ಆರ್. ನರಸಿಂಹಾಚಾರ್ 250 ಪುಸ್ತಕಗಳ ಹಸ್ತಪ್ರತಿಗಳನ್ನು ವಿಮರ್ಶಿಸಿದ್ದಾರೆ. ಬೆಂಗಳೂರಿನ ಮಿಥಿಕ್ ಸೊಸೈಟಿಯ ಬೆಳ್ಳಿಹಬ್ಬದ ಸಮಯದಲ್ಲಿ ‘ಬೃಹದ್ಭಾರತ’ ಪರಿಚಯವನ್ನು ಸ್ವಾರಸ್ಯಕರವಾಗಿ ಮಾಡಿಕೊಟ್ಟಿದ್ದಾರೆ.

ಆರ್ ನರಸಿಂಹಾಚಾರ್ ಅವರ ವಿದ್ವತ್ ಮತ್ತು ಅವರು ಮಾಡಿದ ಘನ ಸಾಧನೆಯನ್ನು ನೋಡಿ ಆಗಿನ ಸರ್ಕಾರ ಮತ್ತು ಪ್ರಜಾಕೋಟಿ ಪ್ರಾಕ್ತನ ವಿಮರ್ಶನ ವಿಚಕ್ಷಣ, ಕರ್ಣಾಟಕ ಪ್ರಾಚ್ಯ ವಿದ್ಯಾವೈಭವ, ಮಹಾಮಹೋಪಾಧ್ಯಾಯ, ಅಭಿನವ ಕನ್ನಡ ಸೀಮಾ ಪುರುಷ, ರಾವ್ ಬಹದ್ದೂರ್ ಮುಂತಾದ ಬಿರುದುಗಳನ್ನಿತ್ತು ಗೌರವಿಸಿದವು. ಇವರು 1918ರಲ್ಲಿ ಜರುಗಿದ 4ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. 1907ರಲ್ಲಿ ಧಾರವಾಡದಲ್ಲಿ ನಡೆದ ಗ್ರಂಥಕರ್ತರ ಸಮ್ಮೇಳನದ ಅಧ್ಯಕ್ಷರೂ ಇವರಾಗಿದ್ದರು.

ಇಷ್ಟೆಲ್ಲಾ ವಿದ್ವಾಂಸರಾಗಿದ್ದರೂ ಅವರಲ್ಲಿ ವೈದಿಕ ಶ್ರದ್ಧೆ ಮತ್ತು ದೈವಭಕ್ತಿ ಅಪರವಾಗಿದ್ದಿತು. “ಅವರು ನಲ್ಲಿ ನೀರು ಎಂದೂ ಕುಡಿದವರಲ್ಲ. ಅವರೊಮ್ಮೆ ಕಲ್ಕತ್ತೆಯಲ್ಲಿದ್ದಾಗ ಮನೆಯ ಹತ್ತಿರ ಬಾವಿ ಇರಲಿಲ್ಲ. ಮನೆಯಾಳಿಗೆ ಆರೋಗ್ಯ ಕಡಿಮೆಯಾಗಿತ್ತು. ಆದ್ದರಿಂದ ದೂರದಲ್ಲಿದ್ದ ಬಾವಿಯಿಂದ ತಾವೇ ನೀರು ಹೊತ್ತು ತರುತ್ತಿದ್ದರಂತೆ. ಇಷ್ಟು ನಿಷ್ಠಾವಂತ ಸಂಪ್ರದಾಯಶೀಲರಾದರೂ ಪರಮತ ಪರಧರ್ಮಗಳ ವಿಷಯದಲ್ಲಿ ತಪ್ಪಿಯೂ ದ್ವೇಷಕ್ಕೆಡೆಕೊಟ್ಟವರಲ್ಲ.

ದಿನಾಂಕ 6 ಡಿಸೆಂಬರ್ 1936ರಂದು ಈ ದಿವ್ಯಚೆತನದ ಆತ್ಮಜ್ಯೋತಿ ಆರಿಹೋಯಿತು.
                                                                       




ಅಭಿನಂದನೆಗಳು:-ಕನ್ನಡ ಸಂಪದ

ವ್ಯಕ್ತಿತ್ವ ಪರಿಪೂರ್ಣತೆ ಸಾಧ್ಯವೇ?

ಮನುಷ್ಯನ ಎಲ್ಲಾ ಆಯಾಮಗಳು ಪರಿಪೂರ್ಣಗೊಳ್ಳಲು ಸಾಧ್ಯವೇ ಎಂಬ ನೋವಿನಲ್ಲಿ ಸದಾ ದ್ವಂದ್ವ.